ಮಂಗಳೂರು: ಉದ್ಯೋಗಾಕಾಂಕ್ಷಿ ಯುವಕರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಲು ಹಾಗೂ ಉದ್ಯಮ ಸಂಸ್ಥೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ–2026’ ಬೃಹತ್ ಉದ್ಯೋಗ ಮೇಳವು ಅ. 7 ಮತ್ತು 8 ರಂದು ಮೂಡುಬಿದಿರೆ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ. 2007 ರಲ್ಲಿ ಆರಂಭಗೊಂಡ ಈ ಉದ್ಯೋಗ ಮೇಳವು ದೇಶದ ಅತಿದೊಡ್ಡ ಉದ್ಯೋಗ ಮೇಳಗಳಲ್ಲಿ ಒಂದಾಗಿ ಬೆಳೆದಿದ್ದು, ಸಾವಿರಾರು ಅಭ್ಯರ್ಥಿಗಳಿಗೆ ಉದ್ಯೋಗದ ಕನಸು ನನಸಾಗಿಸುವ ವೇದಿಕೆ ಆಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ 350 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದ್ದು, 24,298 ಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿವೆ. ಐಟಿ–ಐಟಿಇಎಸ್, ಉತ್ಪಾದನೆ, ಬ್ಯಾಂಕಿಂಗ್ ಮತ್ತು ಹಣಕಾಸು, ಆರೋಗ್ಯ, ಶಿಕ್ಷಣ, ಮಾಧ್ಯಮ, ಆತಿಥ್ಯ, ನಿರ್ಮಾಣ, ಎಲೆಕ್ಟ್ರಾನಿಕ್ಸ್, ದೂರಸಂಪರ್ಕ, ಔಷಧ ತಯಾರಿಕೆ ಹಾಗೂ ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳು ನೇಮಕಾತಿ ನಡೆಸಲಿವೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಅಂಗವಾಗಿ ಈ ಉದ್ಯೋಗ ಮೇಳವನ್ನು ಸಂಪೂರ್ಣ ಉಚಿತವಾಗಿ ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಹಾಗೂ ಅವಕಾಶ ವಂಚಿತ ಪ್ರತಿಭಾವಂತ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡ ಈ ಮೇಳವು ಕಳೆದ 15 ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದುವರೆಗೆ ನಡೆದ 23 ಉದ್ಯೋಗ ಮೇಳಗಳ ಮೂಲಕ 40,848 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ದೊರೆತಿದ್ದು, ಒಟ್ಟು 66,432 ಅಭ್ಯರ್ಥಿಗಳು ವಿವಿಧ ಕಂಪನಿಗಳ ಆಯ್ಕೆ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಈ ಯಶಸ್ಸಿನಿಂದಾಗಿ ಆಳ್ವಾಸ್ ಪ್ರಗತಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಉದ್ಯೋಗ ಮೇಳವಾಗಿ ಬೆಳೆದಿದೆ ಎಂದು ತಿಳಿಸಿದರು.

ಉತ್ಪಾದನಾ ಕ್ಷೇತ್ರದಲ್ಲಿ 74 ಕಂಪನಿಗಳು 5,877ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುತ್ತಿವೆ. ಐಟಿ ಮತ್ತು ಐಟಿಇಎಸ್ ವಲಯದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, 200 ಕ್ಕೂ ಹೆಚ್ಚು ಕೋರ್ ಐಟಿ ಹಾಗೂ 3,500 ಕ್ಕೂ ಅಧಿಕ ನಾನ್-ಐಟಿ ಹುದ್ದೆಗಳು ಲಭ್ಯವಿವೆ. ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದ 30ಕ್ಕೂ ಹೆಚ್ಚು ಸಂಸ್ಥೆಗಳು, ಆರೋಗ್ಯ ಕ್ಷೇತ್ರದ 25 ಪ್ರಮುಖ ಆಸ್ಪತ್ರೆಗಳು, ಚಿಲ್ಲರೆ ವ್ಯಾಪಾರ ಮತ್ತು ಮಾರಾಟ ಕ್ಷೇತ್ರದ 67 ಕಂಪನಿಗಳು, ನಿರ್ಮಾಣ, ಶಿಕ್ಷಣ, ಮಾಧ್ಯಮ, ಔಷಧ ತಯಾರಿಕೆ, ಎಲೆಕ್ಟ್ರಾನಿಕ್ಸ್ ಹಾಗೂ ಆತಿಥ್ಯ ಕ್ಷೇತ್ರದ ಪ್ರಮುಖ ಸಂಸ್ಥೆಗಳೂ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ. ವಾರ್ಷಿಕ ₹3 ಲಕ್ಷದಿಂದ ₹16 ಲಕ್ಷದವರೆಗಿನ ವೇತನದ ಉದ್ಯೋಗಾವಕಾಶಗಳೂ ಲಭ್ಯವಿವೆ ಎಂದು ತಿಳಿಸಿದರು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥೆ ರಂಜಿತಾ ಆಚಾರ್ಯ ಇದ್ದರು.
ಮೇಳಕ್ಕೆ ಬರುವವರಿಗೆ ಉಚಿತ ಬಸ್, ವಸತಿ ವ್ಯವಸ್ಥೆ: ವಿವೇಕ್ ಆಳ್ವ
- ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ನರ್ಸಿಂಗ್, ಎಂಜಿನಿಯರಿಂಗ್, ವೈದ್ಯಕೀಯ, ಅರೆವೈದ್ಯಕೀಯ, ವಾಣಿಜ್ಯ, ನಿರ್ವಹಣೆ ಹಾಗೂ ವಿವಿಧ ವಿಭಾಗಗಳ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಅನುಭವ ಹೊಂದಿದ ಅಭ್ಯರ್ಥಿಗಳಿಗೂ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಆಗಸ್ಟ್ 6 ರಿಂದ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದ್ದು, ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮಂಗಳೂರು, ಬಂಟ್ವಾಳ, ಪುತ್ತೂರು, ಕುಂದಾಪುರ, ಕಾಪು, ಸುಬ್ರಹ್ಮಣ್ಯ, ಉಪ್ಪಳ ಹಾಗೂ ಮೂಡುಬಿದಿರೆಯಲ್ಲಿ ಪೂರ್ವ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ನೇಮಕಾತಿಗೆ ಮತ್ತಷ್ಟು ಪಾರದರ್ಶಕತೆ, ಡಿಜಿಟಲ್ ಸ್ಪರ್ಶ
- ನೇಮಕಾತಿ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕ ಹಾಗೂ ಡಿಜಿಟಲ್‌ಗೊಳಿಸುವ ಉದ್ದೇಶದಿಂದ ಈ ಬಾರಿ ಅಭ್ಯರ್ಥಿಗಳಿಗೆ ಆನ್‌ಲೈನ್ ನೋಂದಣಿ ಕಡ್ಡಾಯ ಮಾಡಲಾಗಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾದ ಉದ್ಯೋಗಾವಕಾಶಗಳು ಹಾಗೂ ಭಾಗವಹಿಸುವ ಕಂಪನಿಗಳ ಮಾಹಿತಿಯನ್ನು ಮುಂಚಿತವಾಗಿಯೇ ಪರಿಶೀಲಿಸಬಹುದು. ಜೊತೆಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಾಟ್‌ಬಾಟ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಅಭ್ಯರ್ಥಿಗಳ ಬಯೋಡೇಟಾವನ್ನು ವಿಶ್ಲೇಷಿಸಿ ಅವರಿಗೆ ಹೊಂದುವ ಕಂಪನಿಗಳು ಮತ್ತು ಉದ್ಯೋಗಗಳನ್ನು ಶಿಫಾರಸು ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9611750531 / 9741440490 / 9008907716 / 7975223865 ಹಾಗೂ ವೆಬ್ ಸೈಟ್ www. Alvaspragati.com ಸಂಪರ್ಕ ಮಾಡಬಹುದು ಎಂದರು.
What do you feel about this post?
Like
Love
Happy
Haha
Sad





