ಬೀದಿ ನಾಯಿ, ಜಾನುವಾರುಗಳ ಹಾವಳಿಗೆ ಬ್ರೇಕ್ ಹಾಕಿ: ಸಾಮಾಜಿಕ ಕಾರ್ಯಕರ್ತ ಸೂರಜ್ ಕುರುಮಕರ್

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಹಾಗೂ ಜಾನುವಾರುಗಳ ಹಾವಳಿ ಹೆಚ್ಚಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ನೈರ್ಮಲ್ಯದ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸೂರಜ್ ಕುರುಮಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

<

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಕಾರವಾರ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಸಾರ್ವಜನಿಕ ಸ್ಥಳಗಳು, ವಸತಿ ಪ್ರದೇಶಗಳು, ಉದ್ಯಾನಗಳು, ಮಾರುಕಟ್ಟೆ ಹಾಗೂ ರಸ್ತೆಗಳಲ್ಲಿ ಬೀದಿ ನಾಯಿಗಳು ಗುಂಪುಗಳಲ್ಲಿ ಸಂಚರಿಸುತ್ತಿವೆ. ಕೆಲ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಮಕ್ಕಳು, ಹಿರಿಯರು ಸೇರಿದಂತೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆ ಪ್ರದೇಶಗಳಲ್ಲಿ ಬೀದಿ ಜಾನುವಾರುಗಳು ಸಂಚರಿಸುತ್ತಿರುವುದರಿಂದ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಜಾನುವಾರುಗಳು ದಾಳಿ ನಡೆಸುವ ಘಟನೆಗಳೂ ನಡೆಯುತ್ತಿದ್ದು, ಅಪಘಾತದ ಸಾಧ್ಯತೆಯೂ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂತಾನ ಶಕ್ತಿಹರಣ, ಲಸಿಕೆ: ಪ್ರಾಣಿ ಜನನ ನಿಯಂತ್ರಣ ನಿಯಮಗಳು–2023 ರ ಅನ್ವಯ ಬೀದಿ ನಾಯಿಗಳ ಸಂತಾನ ಶಕ್ತಿಹರಣ ಹಾಗೂ ರೇಬಿಸ್‌ ನಿರೋಧಕ ಲಸಿಕೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ರೇಬಿಸ್‌ ಶಂಕಿತ ಹಾಗೂ ಆಕ್ರಮಣಕಾರಿ ನಾಯಿಗಳನ್ನು ಪಶುವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಅಗತ್ಯವಿದ್ದಲ್ಲಿ ಪ್ರತ್ಯೇಕಣ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಬೀದಿ ನಾಯಿಗಳ ಸಂಖ್ಯೆ, ಸಂತಾನ ಶಕ್ತಿಹರಣ ಮತ್ತು ಲಸಿಕೆ ಸ್ಥಿತಿ ಹಾಗೂ ನಾಯಿ ದಾಳಿಗೆ ಸಂಬಂಧಿಸಿದ ದೂರುಗಳ ವಾರ್ಡ್‌ವಾರು ದಾಖಲೆ ನಿರ್ವಹಿಸಬೇಕು. ಜಾನುವಾರುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛಂದವಾಗಿ ಬಿಡುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆ, ಮಾರುಕಟ್ಟೆ, ಪಾದಚಾರಿ ಮಾರ್ಗ, ಉದ್ಯಾನ ಹಾಗೂ ಚರಂಡಿಗಳಲ್ಲಿ ಪ್ರಾಣಿಗಳ ಮಲಮೂತ್ರ ಸಂಗ್ರಹವಾಗದಂತೆ ತಕ್ಷಣ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು. ಬೀದಿ ಪ್ರಾಣಿಗಳ ನಿರ್ವಹಣೆಗೆ ಸಮಗ್ರ ಯೋಜನೆ ರೂಪಿಸಿ, ಆಶ್ರಯ, ಪುನರ್ವಸತಿ, ಪಶುವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಸ್ಪಂದನೆಗೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಾಣಿ ಜನನ ನಿಯಂತ್ರಣ ನಿಯಮಗಳಡಿ ನಗರಸಭೆ ಕೈಗೊಂಡಿರುವ ಕ್ರಮಗಳು, ಸಂತಾನಶಕ್ತಿಹರಣ ಮತ್ತು ಲಸಿಕೆ ಪಡೆದ ನಾಯಿಗಳ ಸಂಖ್ಯೆ ಹಾಗೂ ಜಾನುವಾರು ನಿಯಂತ್ರಣಕ್ಕೆ ರೂಪಿಸಿರುವ ಕ್ರಿಯಾ ಯೋಜನೆಯ ವಿವರಗಳನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *