100 ದಿನಗಳಲ್ಲಿ ಅಭಿವೃದ್ಧಿಯ ಹೊಸ ಹೆಜ್ಜೆ, ಉತ್ತರ ಕನ್ನಡಕ್ಕೆ ಹಲವು ಯೋಜನೆಗಳ ಘೋಷಣೆ: ಸಚಿವ ಸವದಿ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ರೈತರು, ಯುವಜನರು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ರಾಜ್ಯದ ಆಡಳಿತ ವ್ಯವಸ್ಥೆಗೆ ಮತ್ತಷ್ಟು ವೇಗ ನೀಡಲು ಸರ್ಕಾರ ಮುಂದಾಗಿದೆ. ಮುಂದಿನ 100 ದಿನಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಘೋಷಿಸಿದರು.

<

ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಹೊಸ ಯೋಜನೆಗಳ ಜಾರಿ: ರೈತ ಮಿತ್ರ–ಬಡವರ ಬಂಧು, ಗ್ರಾಮಾನುಭವ, ಯುವ ಯುಗ–ಯುವ ಕರ್ನಾಟಕ ನಿರ್ಮಾಣ, ಭಾರತ್ ಜೋಡೋ ಯುವಕ ಸಂಘ ಅಭಿಯಾನ, ಯುವ ಉದ್ಯೋಗ ಸೇತು, ಸರ್ಕಾರಿ ಆಸ್ಪತ್ರೆಗಳ ದತ್ತು ಯೋಜನೆ, ನಶಾಮುಕ್ತ ಕರ್ನಾಟಕ, ಪ್ರಜಾ ಸೇವೆ ಇಲಾಖೆ, ಭೂ ಗ್ಯಾರಂಟಿ, ಕರ್ನಾಟಕ ಮೊಬಿಲಿಟಿ ಗ್ರಿಡ್ ಅಭಿಯಾನ ಹಾಗೂ ತೇಗದ ಸಿರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೇಮಕಾತಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಹಲವು ಹುದ್ದೆಗಳ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ನೆರವು: ಉತ್ತರ ಕನ್ನಡ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ₹639.88 ಕೋಟಿ, ಅನ್ನಭಾಗ್ಯ ₹298.89 ಕೋಟಿ, ಯುವನಿಧಿ ₹25.64 ಕೋಟಿ, ಗೃಹಲಕ್ಷ್ಮಿ ₹1,811.84 ಕೋಟಿ ಹಾಗೂ ಗೃಹಜ್ಯೋತಿ ಯೋಜನೆಯಡಿ ₹641.45 ಕೋಟಿ ನೆರವು ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆಯಲ್ಲಿ ಶೇ.16ರಷ್ಟು ಕೊರತೆ ದಾಖಲಾಗಿದ್ದರೂ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. 72 ಖಾಸಗಿ ಕೊಳವೆಬಾವಿಗಳನ್ನು ಕುಡಿಯುವ ನೀರು ಪೂರೈಕೆಗೆ ಬಳಸಿಕೊಳ್ಳಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ನೀಡಲಾಗಿದೆ ಎಂದರು.

ಜಿಲ್ಲೆಗೆ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದ್ದು, ಮೊದಲ ಹಂತದಲ್ಲಿ ₹100 ಕೋಟಿ ಬಿಡುಗಡೆ ಮಾಡಲಾಗಿದೆ. ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕವೂ ಆರಂಭವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 25 ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ 1.85 ಲಕ್ಷ ಮಾನವ ದಿನಗಳನ್ನು ಸೃಜಿಸಿ 10,072 ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಸುಮಾರು 12 ಸಾವಿರ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಜತೆಗೆ ಜಾತಿ, ಮತ, ಧರ್ಮ ಹಾಗೂ ಭಾಷೆಯ ಭೇದಭಾವ ಮರೆತು ದೇಶದ ವೈವಿಧ್ಯತೆ ಮತ್ತು ಅಖಂಡತೆಯನ್ನು ಕಾಪಾಡಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡುವ ಮೂಲಕ ಸಮೃದ್ಧ ಹಾಗೂ ಸಮಾನತೆಯ ಸಮಾಜ ನಿರ್ಮಿಸೋಣ ಎಂದು ಸಚಿವರು ಕರೆ ನೀಡಿದರು.

ಶಾಸಕ ಸತೀಶ್ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *