ಬೆಂಗಳೂರು: ರಾಜ್ಯ ಸರ್ಕಾರ ಸೋಮವಾರ 4 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಬೆಂಗಳೂರಿನ ನೈಋತ್ಯ ವಿಭಾಗದ ಡಿಸಿಪಿಯನ್ನಾಗಿ ಐಪಿಎಸ್ ಅಧಿಕಾರಿ ಲಕ್ಷ್ಮಿ ಗಣೇಶ್ ಕೆ. ಅವರನ್ನು ನೇಮಕ ಮಾಡಿದ್ದು, ಸ್ಯಾಮ್ ವರ್ಗೀಸ್ ಅವರನ್ನು ಮಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಆಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನ ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಯಾಮ್ ವರ್ಗೀಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ನಗರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆಗೆ ವರ್ಗಾಯಿಸಿ ನೇಮಿಸಲಾಗಿದೆ.
ಮಂಗಳೂರು ನಗರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆ ಮಿಥುನ್ ಎಚ್.ಎನ್. ಅವರು ಈಚೆಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿತ್ತು.
ಬೆಂಗಳೂರಿನ ನೈಋತ್ಯ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿತಾ ಬಿ. ಹದಣ್ಣವರ್ ಅವರನ್ನು ಬೆಂಗಳೂರಿನ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಕೊಪ್ಪಳದಿಂದ ವರ್ಗಾವಣೆಯಾದ ಬಳಿಕ ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ ರಾಮ್ ಎಲ್. ಅರಸಿದ್ದಿ ಅವರನ್ನು ಬೆಂಗಳೂರು ನಗರದ ಗುಪ್ತಚರ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

