ನಾಗೋಯಾ: ಹಲವು ವರ್ಷಗಳ ನಿರೀಕ್ಷೆ, ಗಾಯದ ಸವಾಲು ಹಾಗೂ ಹಿಂದಿನ ಏಷ್ಯನ್ ಗೇಮ್ಸ್‌ನ ನಿರಾಸೆಗಳನ್ನು ಮೆಟ್ಟಿನಿಂತ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಕೊನೆಗೂ ಏಷ್ಯನ್ ಗೇಮ್ಸ್ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ಒಟ್ಟು 198 ಕೆ.ಜಿ. ಭಾರ ಎತ್ತಿದ ಮೀರಾಬಾಯಿ ಬೆಳ್ಳಿ ಪದಕ ಗೆದ್ದರು.
ನಾಗೋಯಾ ಸಿಟಿ ಟ್ರೇಡ್ ಆ್ಯಂಡ್ ಇಂಡಸ್ಟ್ರಿ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಮೀರಾಬಾಯಿ ಸ್ನ್ಯಾಚ್‌ನಲ್ಲಿ 87 ಕೆ.ಜಿ. ಹಾಗೂ ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 111 ಕೆ.ಜಿ. ಭಾರ ಎತ್ತಿದರು.
ಉತ್ತರ ಕೊರಿಯಾದ ರಿ ಸಾಂಗ್ ಗುಮ್ ಒಟ್ಟು 215 ಕೆ.ಜಿ. ಭಾರ ಎತ್ತಿ ಚಿನ್ನದ ಪದಕ ಪಡೆದರೆ, ಇಂಡೋನೇಷ್ಯಾದ ಲುಲುಕ್ ಡಯಾನಾ ತ್ರಿ ವಿಯಜಯಾನಾ ಕಂಚಿನ ಪದಕ ಗೆದ್ದರು.
ಮೂರು ಕೂಟಗಳ ಬಳಿಕ ಪದಕ
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು ಮೀರಾಬಾಯಿ ಅವರಿಗೆ ಸುಲಭವಾಗಿರಲಿಲ್ಲ. 2014ರ ಇಂಚಿಯಾನ್ ಕ್ರೀಡಾಕೂಟದಲ್ಲಿ ಅವರು ಒಂಬತ್ತನೇ ಸ್ಥಾನ ಪಡೆದಿದ್ದರು. 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಿಂದ ಬೆನ್ನುನೋವಿನ ಕಾರಣ ಹೊರಗುಳಿದಿದ್ದರು.
2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಪದಕದ ನಿರೀಕ್ಷೆಯಲ್ಲಿದ್ದ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ನಾಲ್ಕನೇ ಪ್ರಯತ್ನದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ವೇದಿಕೆಯಲ್ಲಿ ತಮ್ಮ ಪದಕದ ಬರ ನೀಗಿಸಿಕೊಂಡಿದ್ದಾರೆ.
ಒಲಿಂಪಿಕ್ಸ್, ವಿಶ್ವ ಚಾಂಪಿಯನ್ ಷಿಪ್‌ನಲ್ಲೂ ಸಾಧನೆ
ಮೀರಾಬಾಯಿ ಚಾನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 2017ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದ ಅವರು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ.
ಅವರ ಕ್ರೀಡಾ ಸಾಧನೆಯನ್ನು ಗುರುತಿಸಿ 2018ರಲ್ಲಿ ಪದ್ಮಶ್ರೀ ಹಾಗೂ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಏಷ್ಯನ್ ಗೇಮ್ಸ್ ವೇದಿಕೆಯಲ್ಲಿ ಇದುವರೆಗೆ ಕೈತಪ್ಪಿದ್ದ ಪದಕವನ್ನು ಈ ಬಾರಿ ಬೆಳ್ಳಿಯ ರೂಪದಲ್ಲಿ ತಮ್ಮದಾಗಿಸಿಕೊಂಡ ಮೀರಾಬಾಯಿ ಚಾನು, ಭಾರತದ ವೇಟ್‌ಲಿಫ್ಟಿಂಗ್ ಇತಿಹಾಸದಲ್ಲಿ ಮತ್ತೊಂದು ಗಮನಾರ್ಹ ಸಾಧನೆ ದಾಖಲಿಸಿದ್ದಾರೆ.
What do you feel about this post?
Like
Love
Happy
Haha
Sad







