ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಆಯಾಮ, ಗ್ರಾಮೀಣ ಜನರಲ್ಲಿ ಜಾಗೃತಿ: ಡಾ. ಸುರೇಶ್ ರಾವ್ ಗೆ ರಾಜ್ಯೋತ್ಸವ ಗೌರವದ ಹಿರಿಮೆ

ಅಂತರ ಜಿಲ್ಲೆ ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಚಿಕಿತ್ಸೆ ಕೇವಲ ಆಸ್ಪತ್ರೆಯ ಗೋಡೆಗಳೊಳಗೆ ಸೀಮಿತವಾಗಬಾರದು, ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವಂತಾಗಬೇಕು ಎಂಬ ಈ ಆಶಯದೊಂದಿಗೆ ವೈದ್ಯಕೀಯ ಸೇವೆ ಮತ್ತು ಸಾಮಾಜಿಕ ಜಾಗೃತಿಯನ್ನು ಸಮನ್ವಯಗೊಳಿಸಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ (ಎಂಐಒ) ಆಸ್ಪತ್ರೆಯ ನಿರ್ದೇಶಕ, ಹಿರಿಯ ವಿಕಿರಣ ಕ್ಯಾನ್ಸರ್ ತಜ್ಞ ಡಾ. ಸುರೇಶ್ ರಾವ್ ಅವರಿಗೆ 2026 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

 

ಕರಾವಳಿ ಕರ್ನಾಟಕದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಬಲಪಡಿಸುವಲ್ಲಿ ಡಾ. ಸುರೇಶ್ ರಾವ್ ಅವರ ಕೊಡುಗೆ ಮಹತ್ವದ್ದಾಗಿದೆ. ವಿಕಿರಣ ಚಿಕಿತ್ಸೆ ಮತ್ತು ಬ್ರಾಕಿಥೆರಪಿ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅವರು, ಆಧುನಿಕ ಚಿಕಿತ್ಸಾ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಕ್ಯಾನ್ಸರ್ ರೋಗಿಗಳ ಆರೈಕೆಗೆ ಹೊಸ ಆಯಾಮ ನೀಡಿದ್ದಾರೆ.

ಮಂಗಳೂರಿನಲ್ಲಿ ಅತ್ಯಾಧುನಿಕ ಸ್ಟೀರಿಯೋಟಾಕ್ಟಿಕ್ ಅಬ್ಲೇಟಿವ್ ರೇಡಿಯೇಶನ್ ಥೆರಪಿ ಚಿಕಿತ್ಸಾ ವಿಧಾನವನ್ನು ಪರಿಚಯಿಸಿದ ಪ್ರಮುಖ ವೈದ್ಯರಲ್ಲಿ ಇವರೂ ಒಬ್ಬರು. ಜಾಗತಿಕ ಮಟ್ಟದಲ್ಲಿ ಮೂರು ವಿಕಿರಣ ಆಂಕೊಲಾಜಿ ಚಿಕಿತ್ಸಾ ಕೇಂದ್ರಗಳ ಸ್ಥಾಪನೆಗೂ ಅವರು ನೆರವಾಗಿದ್ದಾರೆ.

ಚಿಕಿತ್ಸೆಯೊಂದಿಗೆ ಸಾಮಾಜಿಕ ಕಾಳಜಿ

ವೈದ್ಯಕೀಯ ಸೇವೆಯ ಜತೆಗೆ ಕ್ಯಾನ್ಸರ್ ಜಾಗೃತಿಗೂ ಆದ್ಯತೆ ನೀಡಿರುವ ಡಾ. ಸುರೇಶ್ ರಾವ್, ‘ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್’ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 10 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಕ್ಯಾನ್ಸರ್ ಜಾಗೃತಿ ಸಮೀಕ್ಷೆ ನಡೆಸುವ ಮೂಲಕ ಗ್ರಾಮೀಣ ಜನರಲ್ಲಿ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಕ್ಯಾನ್ಸರ್‌ನ ಆರಂಭಿಕ ಪತ್ತೆ, ತಡೆಗಟ್ಟುವಿಕೆ ಮತ್ತು ಸೂಕ್ತ ಚಿಕಿತ್ಸೆಯ ಮಹತ್ವವನ್ನು ಜನರಿಗೆ ತಲುಪಿಸುವುದು ಅವರ ಸಾಮಾಜಿಕ ಕಾರ್ಯದ ಪ್ರಮುಖ ಉದ್ದೇಶವಾಗಿದೆ.

ವೈದ್ಯಕೀಯ ಕ್ಷೇತ್ರದ ತಾಂತ್ರಿಕ ಪರಿಣತಿ, ಆಧುನಿಕ ಚಿಕಿತ್ಸಾ ವಿಧಾನಗಳ ಅಳವಡಿಕೆ ಹಾಗೂ ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಹೊಂದಿರುವ ಕಾಳಜಿಯನ್ನು ಗುರುತಿಸಿ ಜಿಲ್ಲಾಡಳಿತ ಡಾ. ಸುರೇಶ್ ರಾವ್ ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವೈದ್ಯಕೀಯ ಸೇವೆಯ ಜತೆಗೆ ಸಮಾಜದ ಆರೋಗ್ಯ ಜಾಗೃತಿಗೂ ಕೊಡುಗೆ ನೀಡುತ್ತಿರುವ ಅವರ ಕಾರ್ಯಕ್ಕೆ ಈ ಗೌರವ ಮತ್ತೊಂದು ಗುರುತಾಗಿದೆ.

Leave a Reply

Your email address will not be published. Required fields are marked *