
ಬೆಂಗಳೂರು: ಡೆನ್ಸೊ ಕಿರ್ಲೋಸ್ಕರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ಉಡುಪಿಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಮೂಲ ಜೀವ ರಕ್ಷಣಾ ಸೌಲಭ್ಯ ಹೊಂದಿರುವ ಆಂಬುಲೆನ್ಸ್‌ನ್ನು ಕೊಡುಗೆಯಾಗಿ ನೀಡಿದೆ.
ಅಕ್ಟೋಬರ್ 30ರಂದು ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬುಲೆನ್ಸ್ ಕೀಲಿಕೈಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್, ಉಪ ವ್ಯವಸ್ಥಾಪಕ ನಿರ್ದೇಶಕ ಅಕಿಹಿರೊ ಡೆಗುಚಿ ಹಾಗೂ ಕಾರ್ಪೊರೇಟ್ ವಿಭಾಗದ ಉಪಾಧ್ಯಕ್ಷ ಮಯೆಜಿಮಾ ಅವರು ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಶೋಕ್ ಅವರಿಗೆ ಹಸ್ತಾಂತರಿಸಿದರು.
ಆಸ್ಪತ್ರೆಗೆ ಬರುವ ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಸಾಗಿಸಲು ಈ ಆಂಬುಲೆನ್ಸ್ ನೆರವಾಗಲಿದೆ. ವಿಶೇಷವಾಗಿ ತುರ್ತು ವೈದ್ಯಕೀಯ ನೆರವಿನ ಅಗತ್ಯವಿರುವ ತಾಯಂದಿರು ಮತ್ತು ಮಕ್ಕಳನ್ನು ಸಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲವಾಗಲಿದೆ. ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ತುರ್ತು ಸಂದರ್ಭಗಳಲ್ಲಿ ಈ ವಾಹನ ಮಹತ್ವದ ನೆರವು ನೀಡಲಿದೆ.
ಕಂಪನಿಯ ಜವಾಬ್ದಾರಿ ಕಾರ್ಖಾನೆಯ ಆವರಣಕ್ಕೆ ಮಾತ್ರ ಸೀಮಿತವಾಗಿರಬಾರದು ಎಂಬ ನಂಬಿಕೆಯಿಂದ ಈ ಕೊಡುಗೆ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟುವುದು ಹಾಗೂ ಜನರು ಸುರಕ್ಷಿತವಾಗಿ ಸಂಚರಿಸುವ ಸಮಾಜ ನಿರ್ಮಿಸುವುದು ಡೆನ್ಸೊ ಸಮೂಹದ ಜಾಗತಿಕ ಆಶಯವಾಗಿದೆ. ‘ನೆಮ್ಮದಿಯ ಪ್ರಯಾಣ’ ಎಂಬ ಧ್ಯೇಯದಡಿ ರಸ್ತೆ ಸುರಕ್ಷತೆ ಮತ್ತು ತುರ್ತು ಸೇವೆಗಳಿಗೆ ಸಂಸ್ಥೆ ಆದ್ಯತೆ ನೀಡುತ್ತಿದೆ.






