ಮಂಗಳೂರು: ಮಂಗಳೂರು ನಗರದಲ್ಲಿ ಹಲವು ವರ್ಷಗಳಿಂದ ಕಾಡುತ್ತಿರುವ ಭೂಗತ ಒಳಚರಂಡಿ, ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರು, ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ರಸ್ತೆ ಸೌಕರ್ಯ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ನಗರದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಸಮಸ್ಯೆಗಳಿಗೆ ಆದ್ಯತೆ ನಿಗದಿಪಡಿಸಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನೂತನ ಪಾಲಿಕೆ ಕಮಿಷನರ್ ರಾಹುಲ್ ರತ್ನಂ ಪಾಂಡೆ ಅವರು ಗುರುವಾರ ನಡೆದ ಮಾಧ್ಯಮ ಸಂವಾದದಲ್ಲಿ ತಿಳಿಸಿದರು.
ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ 15 ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸುವೆ, ಪಚ್ಚನಾಡಿಯಲ್ಲಿನ ಸಾಂಪ್ರದಾಯಿಕ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಂಬಂಧಪಟ್ಟ ಕಂಪನಿಯೊಂದಿಗೆ ಸಭೆ ನಡೆಸಬೇಕಿದೆ. ಮನೆಗಳಿಂದಲೇ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸುವುದು ಹಾಗೂ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಲು ವಿಸ್ತೃತ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನೂ ನಡೆಸಲಾಗುವುದು. ಕೆಲವು ಸರಕಾರೇತರ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಈ ಕಾರ್ಯಕ್ಕೆ ಸಹಕಾರ ನೀಡಲು ಮುಂದಾಗಿದ್ದು, ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಗಳೂರು ನಗರದ ಪ್ರಮುಖ ಸಮಸ್ಯೆ ಭೂಗತ ಒಳಚರಂಡಿ ವ್ಯವಸ್ಥೆಯದ್ದಾಗಿದೆ. 1961ರಲ್ಲಿ ಒಳಚರಂಡಿ ವ್ಯವಸ್ಥೆ ಆರಂಭವಾಗಿದ್ದು, ಈವರೆಗೆ ಶೇ.65ರಷ್ಟು ಪ್ರದೇಶ ಮಾತ್ರ ಒಳಚರಂಡಿ ವ್ಯವಸ್ಥೆಯ ವ್ಯಾಪ್ತಿಗೆ ಬಂದಿದೆ. ಈಗಾಗಲೇ ವ್ಯವಸ್ಥೆ ಇರುವ ಪ್ರದೇಶದ ಶೇ 35ರಷ್ಟು ಭಾಗದಲ್ಲಿ 65 ವರ್ಷಗಳಿಗೂ ಹಳೆಯ ಪೈಪ್‌ಲೈನ್‌ಗಳಿರುವುದರಿಂದ ಮಳೆಗಾಲದಲ್ಲಿ ಸೋರಿಕೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದರು.
ಒಳಚರಂಡಿ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಲು 1,250 ಕೋಟಿ ರೂ. ಅನುದಾನದ ಅಗತ್ಯವಿದ್ದು, ಈ ಕುರಿತು ಪಾಲಿಕೆಯಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಮಂಗಳೂರಿನಲ್ಲಿ ಮುಂದಿನ ಸಚಿವ ಸಂಪುಟ ಸಭೆ ನಡೆಯುವ ನಿರೀಕ್ಷೆಯಿದ್ದು, ಈ ಸಂದರ್ಭ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಈ ಮಧ್ಯೆ ತುರ್ತು ಕಾಮಗಾರಿಗಳ ಅಗತ್ಯವಿರುವ ಕಡೆ ಪಾಲಿಕೆ ನಿಧಿಯಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಂಬೇಲ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿರುವ ವೆಟ್‌ವೆಲ್‌ಗಳು ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದೆ. ಪಾಲಿಕೆ ವ್ಯಾಪ್ತಿಯ ವೆಟ್‌ವೆಲ್‌ಗಳ ಪ್ರಸ್ತುತ ಸಾಮರ್ಥ್ಯವನ್ನು ಪರಿಶೀಲಿಸಿ, 2051ರ ನಿರೀಕ್ಷಿತ ಜನಸಂಖ್ಯೆಗೆ ಅನುಗುಣವಾಗಿ ಅವುಗಳನ್ನು ಸದೃಢಗೊಳಿಸಲು ಆದ್ಯತೆ ನೀಡಲಾಗುವುದು ಎಂದರು.
ನಗರದಲ್ಲಿರುವ ನಾಲ್ಕು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪೈಕಿ ಸದ್ಯ ಕಾವೂರು ಘಟಕದಲ್ಲಿ ಮಾತ್ರ ತ್ಯಾಜ್ಯ ನೀರು ಸಂಸ್ಕರಣೆಗೊಂಡು ಮರುಬಳಕೆಯಾಗುತ್ತಿದೆ. ಬಜಾಲ್, ಪಚ್ಚನಾಡಿ ಸೇರಿದಂತೆ ಕೆಲವು ಘಟಕಗಳಲ್ಲಿ ಪ್ರಾಥಮಿಕ ಹಂತದ ಸಂಸ್ಕರಣೆ ನಡೆಯುತ್ತಿದ್ದು, ದ್ವಿತೀಯ ಹಂತದ ಸಂಸ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದರು.
ತ್ಯಾಜ್ಯ ನೀರು ನದಿಗಳಿಗೆ ಹರಿದು ಜಲಚರಗಳ ಸಾವು ಹಾಗೂ ನೀರು ಮಾಲಿನ್ಯವಾಗುತ್ತಿರುವ ಕುರಿತು ಪಾಲಿಕೆ ವಿರುದ್ಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಬಜಾಲ್ ಮತ್ತು ಪಚ್ಚನಾಡಿಯಲ್ಲಿ ದ್ವಿತೀಯ ಹಂತದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಾವೂರು ಘಟಕದಲ್ಲಿ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಸಂಸ್ಕರಿಸಿದ ನೀರು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿನ ಒಪ್ಪಂದದಂತೆ ಪಚ್ಚನಾಡಿ ಘಟಕದಿಂದ ಕಾವೂರಿಗೆ ಸಂಸ್ಕರಿಸಿದ ನೀರನ್ನು ಹರಿಸಿ ಕೈಗಾರಿಕೆಗಳಿಗೆ ಬಳಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 25 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ನಗರ ಸವಾಲು ನಿಧಿಯಿಂದ ಅನುದಾನ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಸದ್ಯ ಪಾಲಿಕೆಯ 50 ವಾರ್ಡ್‌ಗಳಿಗೆ ಪ್ರತಿದಿನ ಹಾಗೂ 10 ವಾರ್ಡ್‌ಗಳಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನಗರದ ಪ್ರತಿಯೊಂದು ವಾರ್ಡ್‌ನ ಪ್ರತಿಯೊಂದು ಮನೆಗೂ ಪ್ರತಿದಿನ ನೀರು ಪೂರೈಸುವುದು ಪಾಲಿಕೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ನೀರು ಸಂಸ್ಕರಣಾ ಘಟಕದಲ್ಲಿ ಅಗತ್ಯ ಬದಲಾವಣೆಗಳನ್ನು ಕೈಗೊಂಡು, ಹಬ್ಬಗಳ ಬಳಿಕ ಎಲ್ಲಾ 60 ವಾರ್ಡ್‌ಗಳಿಗೂ ಪ್ರತಿದಿನ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದ ಕೆಲವು ಪ್ರಮುಖ ರಸ್ತೆಗಳ ಅಗಲೀಕರಣ ಹಾಗೂ ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಮರಗಳನ್ನು ನೆಟ್ಟು ಅವುಗಳ ಪೋಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂವಾದದಲ್ಲಿ ಉಪ ಆಯುಕ್ತ (ಆಡಳಿತ) ಸ್ವಾಮಿ ಎ.ಎಲ್ ಇದ್ದರು.
ಮಾರುಕಟ್ಟೆಗಳ ಸ್ಥಿತಿಗತಿ ಕುರಿತು ಮುಂದಿನ ವಾರ ಸಭೆ
ಉರ್ವಾ ಮಾರುಕಟ್ಟೆ ಸೇರಿದಂತೆ ನಗರದ ಹಲವು ಮಾರುಕಟ್ಟೆಗಳು ನಿರ್ಮಾಣಗೊಂಡು ಹಲವು ವರ್ಷಗಳಾದರೂ ಸಮರ್ಪಕವಾಗಿ ಬಳಕೆಯಾಗದೆ ಇರುವುದು ಗಮನಕ್ಕೆ ಬಂದಿದೆ. ಮಾರುಕಟ್ಟೆಗಳ ನಿರ್ಮಾಣಕ್ಕೆ ಸಾಕಷ್ಟು ಹಣ ವೆಚ್ಚವಾಗಿದ್ದು, ಅದಕ್ಕಾಗಿ ಸಾಲವನ್ನೂ ಪಡೆಯಲಾಗಿದೆ. ಹೀಗಾಗಿ ನಿರ್ಮಿಸಿರುವ ಮಾರುಕಟ್ಟೆಗಳನ್ನು ಸಮರ್ಪಕವಾಗಿ ಬಳಸುವ ಕುರಿತು ಕ್ರಮ ಅಗತ್ಯವಾಗಿದೆ. ಕಂಕನಾಡಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೇಂದ್ರ ಮಾರುಕಟ್ಟೆ ಸೇರಿದಂತೆ ನಗರದ ಎಲ್ಲ ಮಾರುಕಟ್ಟೆಗಳ ಸ್ಥಿತಿಗತಿ ಕುರಿತು ಮುಂದಿನ ವಾರ ಸಭೆ ನಡೆಸಿ, ಅವುಗಳ ಬಳಕೆ ಹಾಗೂ ನಿರ್ವಹಣೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಹುಲ್ ರತ್ನಂ ಪಾಂಡೆ ತಿಳಿಸಿದರು.
What do you feel about this post?
Like
Love
Happy
Haha
Sad


