ಮಂಗಳೂರು: ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಅಪರೂಪದ ಜನ್ಮಜಾತ ಹೃದಯದ ದೋಷವಾದ ಸೈನಸ್ ವೆನೋಸಸ್ ಏಟ್ರಿಯಲ್ ಸೆಪ್ಟಲ್ ಡಿಫೆಕ್ಟ್ (ಎಎಸ್ ಡಿ) ಗೆ ಅತ್ಯಾಧುನಿಕ ಪಿನ್-ಹೋಲ್(ಟ್ರಾನ್ಸ್‌ಕ್ಯಾಥೆಟರ್) ವಿಧಾನದ ಮೂಲಕ ಯಶಸ್ವಿ ಚಿಕಿತ್ಸೆ ನೀಡುವಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹೃದ್ರೋಗ ತಜ್ಞರು ಯಶಸ್ವಿಯಾಗಿದ್ದಾರೆ ಎಂದು ಎಜೆ ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಸಿರಾಟದ ತೊಂದರೆ ಹಾಗೂ ತೀವ್ರ ಆಯಾಸದಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿಗೆ ಚಿಕಿತ್ಸೆ ನೀಡುವ ವೇಳೆ ಅಪರೂಪದ ಜನ್ಮಜಾತ ಹೃದಯದ ದೋಷ ಪತ್ತೆ ಆಗಿತ್ತು. ಸಾಮಾನ್ಯವಾಗಿ ಈ ಸಮಸ್ಯೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನೇ ನಡೆಸಲಾಗುತ್ತದೆ. ಆದರೆ, ವೈದ್ಯರ ತಂಡ ರೋಗಿಯ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ಟ್ರಾನ್ಸ್‌ಕ್ಯಾಥೆಟರ್ ವಿಧಾನದ ಮೂಲಕ ಚಿಕಿತ್ಸೆ ನೀಡಲು ನಿರ್ಧರಿದ್ದರು ಎಂದು ತಿಳಿಸಿದರು.
ರೋಗಿಯ ಬಲ ಕಾಲಿನ ರಕ್ತನಾಳದಲ್ಲಿ ಅತಿ ಸಣ್ಣ ರಂಧ್ರದ ಮೂಲಕ ಕ್ಯಾಥೆಟರ್ ಅನ್ನು ಹೃದಯದವರೆಗೆ ತಲುಪಿಸಿ, ಅತ್ಯಾಧುನಿಕ ಕವರ್ಡ್ ಸ್ಟೆಂಟ್ ಅಳವಡಿಸುವ ಮೂಲಕ ಹೃದಯದ ದೋಷವನ್ನು ಯಶಸ್ವಿಯಾಗಿ ಸರಿಪಡಿಸಲಾಯಿತು. ಈ ವಿಧಾನದಿಂದ ಕಡಿಮೆ ನೋವು, ಕಡಿಮೆ ರಕ್ತಸ್ರಾವ, ಶೀಘ್ರ ಚೇತರಿಕೆ ಹಾಗೂ ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ವಾಸ ಸಾಧ್ಯವಾಗಿದ್ದು, ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅಪಾಯವೂ ತಪ್ಪಿದೆ ಎಂದು ತಿಳಿಸಿದರು.
ಮಕ್ಕಳ ಇಂಟರ್ವೆನ್ಷನಲ್ ಹೃದ್ರೋಗ ತಜ್ಞ ಡಾ. ಪ್ರೇಮ್ ಆಳ್ವ ಹಾಗೂ ಹಿರಿಯ ಇಂಟರ್ವೆನ್ಷನಲ್ ಹೃದ್ರೋಗ ತಜ್ಞ ಡಾ. ಪ್ರವೀಣ್ ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಚಿಕಿತ್ಸೆ ನೆರವೇರಿತು. ಅರಿವಳಿಕೆ ಮತ್ತು ಉಸಿರಾಟ ನಿರ್ವಹಣೆಯನ್ನು ಡಾ. ಗುರುರಾಜ್ ತಂತ್ರಿ ಹಾಗೂ ಡಾ. ಕಾರ್ತಿಕ್ ನಿರ್ವಹಿಸಿದರು. ಡಾ. ಅಶೋಕ್ ಅವರು ಟ್ರಾನ್ಸ್-ಈಸೋಫೇಜಿಯಲ್ ಎಕೋಕಾರ್ಡಿಯೋಗ್ರಫಿ (ಟಿಇಇ) ಮೂಲಕ ನಿಖರ ಮಾರ್ಗದರ್ಶನ ನೀಡಿದರು. ಕ್ಯಾಥ್ ಲ್ಯಾಬ್, ನರ್ಸಿಂಗ್ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯ ಸಮನ್ವಯವೂ ಚಿಕಿತ್ಸೆ ಯಶಸ್ಸಿಗೆ ಕಾರಣವಾ ಆಯಿತು ಎಂದರು.
ಚಿಕಿತ್ಸೆ 45 ದಿನಗಳ ಬಳಿಕ ನಡೆದ ಮರು ಪರಿಶೀಲನೆಯಲ್ಲಿ ರೋಗಿ ಸಂಪೂರ್ಣ ಚೇತರಿಸಿಕೊಂಡಿದ್ದು, ಯಾವುದೇ ತೊಂದರೆಯಿಲ್ಲದೆ ದೈನಂದಿನ ಚಟುವಟಿಕೆಗಳಿಗೆ ಮರಳಿದ್ದಾರೆ. ಕರಾವಳಿ ಭಾಗದ ಜನರಿಗೆ ವಿಶ್ವಮಟ್ಟದ ಅತ್ಯಾಧುನಿಕ ಹೃದಯ ಚಿಕಿತ್ಸೆಗಳನ್ನು ಸ್ಥಳೀಯವಾಗಿಯೇ ಒದಗಿಸುವ ಬದ್ಧತೆಗೆ ಈ ಸಾಧನೆ ಸಾಕ್ಷಿ ಆಗಿದೆ. ಇಂತಹ ಸಂಕೀರ್ಣ ಜನ್ಮಜಾತ ಹೃದಯದ ಕಾಯಿಲೆಗಳ ಚಿಕಿತ್ಸೆಗೆ ಇನ್ನು ಮುಂದೆ ದೂರದ ನಗರಗಳಿಗೆ ತೆರಳುವ ಅಗತ್ಯವಿಲ್ಲ ಎಂದು ತಿಳಿಸಿದರು.
What do you feel about this post?
Like
Love
Happy
Haha
Sad





