ಮಂಗಳೂರು: ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನವಾದ ಮೀಲಾದುನ್ನಬಿ ಕರುಣೆ, ಸಂಯಮ, ಶಿಸ್ತು, ಮಾನವೀಯತೆ ಹಾಗೂ ಸೌಹಾರ್ದದ ಸಂದೇಶವನ್ನು ಸಾರುವ ದಿನವಾಗಲಿ ಎಂದು ಸಚಿವ ಯು.ಟಿ. ಖಾದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀಲಾದುನ್ನಬಿ ಪ್ರಯುಕ್ತ ಸಮಸ್ತ ಕನ್ನಡಿಗರಿಗೆ ಶುಭಾಶಯ ಕೋರಿರುವ ಅವರು, ಪ್ರವಾದಿ ಮುಹಮ್ಮದ್ ಅವರ ಬದುಕಿನಲ್ಲಿದ್ದ ಕರುಣೆ, ಸಂಯಮ, ಶಿಸ್ತು, ನೆರೆಯವರ ಹಕ್ಕಿನ ಗೌರವ, ದುರ್ಬಲರ ಕಾಳಜಿ ಹಾಗೂ ಸಮಾಜಕ್ಕೆ ಒಳಿತು ಮಾಡುವ ಮನೋಭಾವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪ್ರವಾದಿ ಅವರನ್ನು ಗೌರವಿಸುವ ಅತ್ಯುತ್ತಮ ಮಾರ್ಗವೆಂದರೆ ಅವರ ಜೀವನ ಮೌಲ್ಯಗಳನ್ನು ನಮ್ಮ ನಡವಳಿಕೆಯಲ್ಲಿ ಪಾಲಿಸುವುದಾಗಿದೆ. ಮೀಲಾದುನ್ನಬಿ ಆಚರಣೆಗಳು ಜನಸಾಮಾನ್ಯರಿಗೆ ಯಾವುದೇ ರೀತಿ ತೊಂದರೆ ಉಂಟು ಮಾಡದಂತೆ ಎಚ್ಚರಿಕೆ ವಹಿಸಬೇಕು. ರಸ್ತೆಯಲ್ಲಿ ಸಂಚರಿಸುವವರಿಗೆ ಅಡಚಣೆಯಾಗದಂತೆ ಹಾಗೂ ವಿದ್ಯಾರ್ಥಿಗಳ ಓದು ಮತ್ತು ವೃದ್ಧರ ವಿಶ್ರಾಂತಿಗೆ ಭಂಗವಾಗದಂತೆ ಶಾಂತಿ, ಸೌಹಾರ್ದತೆಯಿಂದ ಆಚರಣೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸುವ ಮೂಲಕ ಪ್ರೀತಿ, ಸಾಮರಸ್ಯ ಮತ್ತು ಭ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ನೆಮ್ಮದಿಯ ನಾಡು, ಸೌಹಾರ್ದಯುತ ಕರ್ನಾಟಕ ಹಾಗೂ ಬಲಿಷ್ಠ ದೇಶ ನಿರ್ಮಾಣ ನಮ್ಮ ಸಂಕಲ್ಪವಾಗಲಿ ಎಂದು ಆಶಿಸಿದರು.


