ಮಂಗಳೂರು ರೈಲು ವಿಭಾಗ ಮೈಸೂರಿಗೆ ಸೇರ್ಪಡೆ, ಆಡಳಿತಾತ್ಮಕ ಸಹಕಾರ ಕೋರಿ ಸಿಎಂಗೆ ಸಂಸದ ಕ್ಯಾ. ಚೌಟ ಪತ್ರ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶೀಘ್ರ ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ಅಗತ್ಯ ಆಡಳಿತಾತ್ಮಕ ಸಹಕಾರ ನೀಡಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಂಗಳೂರು ರೈಲು ಜಾಲವನ್ನು ಪಾಲ್ಘಾಟ್‌ ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರಿಸುವ ಸಂಬಂಧ ರೈಲ್ವೆ ಸಚಿವಾಲಯ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಈ ಕುರಿತು ರೈಲ್ವೆ ಮಂಡಳಿ ಅಧಿಸೂಚನೆಯನ್ನೂ ಹೊರಡಿಸಿದೆ. ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುವರ್ಷಗಳ ಬೇಡಿಕೆ ಈಡೇರಿರುವುದು ಮಹತ್ವದ ಬೆಳವಣಿಗೆ. ಇದರಿಂದ ದಕ್ಷಿಣ ಕನ್ನಡ ಮಾತ್ರವಲ್ಲದೆ ರಾಜ್ಯದ ರೈಲು ಜಾಲದ ಬಲವರ್ಧನೆಗೂ ಅನುಕೂಲವಾಗಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮಂಗಳೂರು ರೈಲು ಜಾಲವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮುತುವರ್ಜಿ ವಹಿಸಬೇಕು. ಯಾವುದೇ ರೀತಿಯ ಆಡಳಿತಾತ್ಮಕ ಗೊಂದಲ ಅಥವಾ ವಿಳಂಬ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚೌಟ ಒತ್ತಾಯಿಸಿದ್ದಾರೆ.

ಕೇರಳದಿಂದ ಮರುಪರಿಶೀಲನೆಗೆ ಒತ್ತಡ

ರೈಲ್ವೆ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು ಮರುಪರಿಶೀಲಿಸುವಂತೆ ಕೇರಳ ಮುಖ್ಯಮಂತ್ರಿ ಸೇರಿದಂತೆ ಅಲ್ಲಿನ ವಿವಿಧ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ವಿಚಾರದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮಂಗಳೂರು ರೈಲು ಜಾಲವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ರೈಲ್ವೆ ಸಚಿವಾಲಯದ ನಿರ್ಧಾರ ಜಾರಿಗೆ ಯಾವುದೇ ಅಡ್ಡಿ ಅಥವಾ ಆಡಳಿತಾತ್ಮಕ ತೊಡಕು ಉಂಟಾಗದಂತೆ ನೋಡಿಕೊಳ್ಳುವ ಮೂಲಕ ಕರ್ನಾಟಕದ ಹಿತ ಕಾಪಾಡಬೇಕು ಎಂದು ಕ್ಯಾ. ಚೌಟ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *