ಕಾರವಾರ: ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲನ್ನು ಕಾರವಾರದವರೆಗೆ ವಿಸ್ತರಿಸಲು ಕರಾವಳಿಯ ಎಲ್ಲ ಸಂಸದರು ಒಗ್ಗಟ್ಟಿನಿಂದ ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಕುಮಟಾ ರೈಲು ನಿಲ್ದಾಣದಲ್ಲಿ ನೂತನ ಪ್ರಯಾಣಿಕರ ಸೌಲಭ್ಯಗಳ ಉದ್ಘಾಟನೆ ಹಾಗೂ ಕುಮಟಾ–ಕಾಚೇಗುಡ ವಿಸ್ತರಿತ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಕುಮಟಾ, ಗೋಕರ್ಣ, ಭಟ್ಕಳ ಮತ್ತು ಮುರುಡೇಶ್ವರ ರೈಲು ನಿಲ್ದಾಣಗಳಲ್ಲಿ ಒಟ್ಟು ಸುಮಾರು ₹10 ಕೋಟಿ ವೆಚ್ಚದ ವಿವಿಧ ಸಾರ್ವಜನಿಕ ಉಪಯೋಗದ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಕೊಂಕಣ ರೈಲ್ವೆಯ ಸಮಗ್ರ ಅಭಿವೃದ್ಧಿಗಾಗಿ ₹7,000 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದರು.
ಅಂಕೋಲಾ–ಹುಬ್ಬಳ್ಳಿ ರೈಲು ಮಾರ್ಗ ಯೋಜನೆಗೆ ಸರ್ಕಾರ ಬದ್ಧವಾಗಿದ್ದು, ಕುಮಟಾ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಶೆಲ್ಟರ್ ನಿರ್ಮಾಣ ಹಾಗೂ ಹೆಗಡೆ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕೊಂಕಣ ರೈಲ್ವೆ ಕಾಮಗಾರಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ವಿತರಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದರು.
ಶಾಸಕ ದಿನಕರ ಶೆಟ್ಟಿ ಅವರು ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಕುಮಟಾ ಭಾಗಕ್ಕೆ ಹೆಚ್ಚಿನ ರೈಲು ಸೌಲಭ್ಯಗಳು ದೊರೆತಿವೆ ಎಂದು ಹೇಳಿದರು. ರೈಲುಗಳಲ್ಲಿ ಮುಂದಿನ ನಿಲ್ದಾಣದ ದೂರದ ಮಾಹಿತಿ ಪ್ರದರ್ಶನ ವ್ಯವಸ್ಥೆ ಹಾಗೂ ಶೌಚಾಲಯಗಳಿಗೆ ಸ್ಲೈಡಿಂಗ್ ಬಾಗಿಲು ಅಳವಡಿಸುವಂತೆ ಅವರು ಒತ್ತಾಯಿಸಿದರು.
ಕೊಂಕಣ ರೈಲ್ವೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಸುಧಾ ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.
ಇದೇ ವೇಳೆ, ಕಾಚೇಗುಡ–ಮುರುಡೇಶ್ವರ ದ್ವಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕುಮಟಾವರೆಗೆ ವಿಸ್ತರಿಸಿರುವುದರಿಂದ ಕರ್ನಾಟಕ–ತೆಲಂಗಾಣ ನಡುವಿನ ಸಂಪರ್ಕ ಮತ್ತಷ್ಟು ಬಲವಾಗಲಿದ್ದು, ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯಮಿಗಳು ಹಾಗೂ ಸ್ಥಳೀಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
What do you feel about this post?
Like
Love
Happy
Haha
Sad
