ಉಜಿರೆ: ಗ್ರಾಮೀಣ ಮಹಿಳೆಯರ ಸಂಕಷ್ಟದ ಬದುಕನ್ನು ಕಣ್ಣಾರೆ ಕಂಡ ಬಳಿಕ ಅವರಿಗೆ ಶಾಶ್ವತ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಪ್ರಯತ್ನವೇ ‘ಸಿರಿ’ ಎಂಬ ಮಹಿಳಾ ಆರ್ಥಿಕ ಸಬಲೀಕರಣದ ಚಳವಳಿಯಾಗಿ ಬೆಳೆದು ಬರುತ್ತಿದೆ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಹೇಳಿದರು.
ಬೆಳ್ತಂಗಡಿಯ ಮಾತೃಶ್ರೀ ಸಿರಿ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನೆ ಮಾಡಿ ಭಾನುವಾರ ಧರ್ಮಸ್ಥಳದಲ್ಲಿ ಅವರು ಮಾತನಾಡಿ, ಸರ್ವಧರ್ಮೀಯರನ್ನೂ, ಎಲ್ಲ ಜಾತಿಯವರನ್ನೂ ಸಮಾನತೆ ಮತ್ತು ಗೌರವಭಾವದಿಂದ ಪರಿಗಣಿಸಿ ಸಾಮಾಜಿಕ ಸಾಮರಸ್ಯದ ಜತೆಗೆ ಅವರು ಮಾಡುತ್ತಿರುವ ಸೇವೆ ಆದರ್ಶ ಹಾಗೂ ಅನುಕರಣೀಯ ಎಂದರು.

ಧರ್ಮ ಮತ್ತು ಪರಂಪರೆಯ ರಕ್ಷಣೆಯ ಜತೆಗೆ ಅನ್ನದಾನ, ವಿದ್ಯಾದಾನ, ಔಷಧದಾನ, ಅಭಯ ದಾನ ಮೊದಲಾದ ಮಾನವೀಯ ಸೇವೆಗಳನ್ನು ಮಾಡುವುದರ ಜತೆಗೆ ಸ್ವಚ್ಛತೆ ಕಾಪಾಡುವುದು ಹಾಗೂ ವೈಜ್ಞಾನಿಕ ಪಾರದರ್ಶಕ ಆಡಳಿತ ವೈಖರಿ ಮಾದರಿ ಆಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಚಟುವಟಿಕೆಗಳ ಸಂದರ್ಭದಲ್ಲಿ ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ಕಂಡು ದೀರ್ಘಾವಧಿ ಹಾಗೂ ಅಲ್ಪಾವಧಿ ಕೃಷಿ ಮಾದರಿಗಳನ್ನು ಪರಿಚಯಿಸಲಾಯಿತು. ಇದೇ ಪ್ರಯತ್ನ ಕ್ರಮೇಣ ‘ಸಿರಿ’ ಸಂಸ್ಥೆಯಾಗಿ ರೂಪುಗೊಂಡು, ಇದೀಗ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಮೂಲಕ ಮಹಿಳಾ ಸಬಲೀಕರಣದ ಹೊಸ ಅಧ್ಯಾಯ ಆರಂಭಿಸಿದೆ ಎಂದರು.
ಈ ಪರಿಸ್ಥಿತಿಯನ್ನು ಗಮನಿಸಿ ಅಡಿಕೆ, ರಬ್ಬರ್, ತೆಂಗಿನಂತಹ ದೀರ್ಘಾವಧಿ ಬೆಳೆಗಳ ಜತೆಗೆ ತರಕಾರಿ ಕೃಷಿ, ಮಲ್ಲಿಗೆ ಬೆಳೆ, ಹೈನುಗಾರಿಕೆ ಮೊದಲಾದ ತಕ್ಷಣದ ಆದಾಯ ತರುವ ಚಟುವಟಿಕೆಗಳನ್ನು ಉತ್ತೇಜಿಸಲಾಯಿತು. ಕೃಷಿ ಆರಂಭಿಕ ಹಂತದಲ್ಲಿ ಕುಟುಂಬಗಳಿಗೆ ಅಗತ್ಯ ನೆರವು ಮತ್ತು ಆಹಾರ ಧಾನ್ಯಗಳನ್ನೂ ವಿತರಿಸಲಾಯಿತು ಎಂದು ಹೇಳಿದರು.
ಮಹಿಳೆಯರಿಗೆ ಹೆಚ್ಚುವರಿ ಆದಾಯದ ಮೂಲ ಕಲ್ಪಿಸುವ ಉದ್ದೇಶದಿಂದ ಹೊಲಿಗೆ ಘಟಕ, ಅಗರಬತ್ತಿ, ಬ್ಲೀಚಿಂಗ್ ಪೌಡರ್, ಜ್ಯೂಸ್, ಉಪ್ಪಿನಕಾಯಿ ಹಾಗೂ ಖಾರ ಪದಾರ್ಥ ತಯಾರಿಕಾ ಕೇಂದ್ರಗಳನ್ನು ವಿವಿಧ ಗ್ರಾಮಗಳಲ್ಲಿ ಸ್ಥಾಪಿಸಲಾಯಿತು. ಕಚ್ಚಾ ವಸ್ತು ಪೂರೈಕೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು. ಇದರಿಂದ ಮಹಿಳೆಯರು ಸ್ವ-ಉದ್ಯೋಗದ ಮೂಲಕ ಆದಾಯ ಗಳಿಸಲು ಸಾಧ್ಯವಾಯಿತು ಎಂದರು.
ಆದರೆ ವಿವಿಧ ಗ್ರಾಮಗಳಲ್ಲಿ ಘಟಕಗಳು ಹರಡಿಕೊಂಡಿದ್ದರಿಂದ ನಿರ್ವಹಣೆಯಲ್ಲಿ ಸವಾಲುಗಳು ಎದುರಾದವು. ಹೀಗಾಗಿ ಮಹಿಳೆಯರು ಒಂದೇ ಸ್ಥಳದಲ್ಲಿ ಸೇರಿ ಗೌರವಯುತವಾಗಿ ಕೆಲಸ ಮಾಡುವ, ಪರಸ್ಪರ ಬೆಂಬಲಿಸುವ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಸಾಮಾನ್ಯ ವೇದಿಕೆಯ ಅಗತ್ಯತೆ ಕಂಡು ಬಂದಿತು. ಅದರ ಫಲವಾಗಿ 2004ರಲ್ಲಿ ‘ಸಿರಿ’ಯನ್ನು ಲಾಭರಹಿತ ಸೆಕ್ಷನ್-8 ಸಂಸ್ಥೆಯಾಗಿ ಸ್ಥಾಪಿಸಲಾಯಿತು ಎಂದು ವಿವರಿಸಿದರು.
‘ಮಾತೃಶ್ರೀ ಎಂಬ ಹೆಸರಿನಲ್ಲಿ ಆಳ ಅರ್ಥ ಅಡಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಕೇವಲ ಕುಟುಂಬದ ಸದಸ್ಯೆಯಲ್ಲ; ಸಮಾಜವನ್ನು ಉಳಿಸುವ ಶಕ್ತಿ. ತಾಯಿತನ, ತ್ಯಾಗ, ಶಕ್ತಿ ಮತ್ತು ಕರುಣೆ ಪ್ರತೀಕ. ಆದ್ದರಿಂದ ಈ ಕೈಗಾರಿಕಾ ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಮಹಿಳೆಯೂ ಕೇವಲ ಕಾರ್ಮಿಕರಲ್ಲ, ಸೃಷ್ಟಿಕರ್ತೆ ಮತ್ತು ದೇಶದ ಶಕ್ತಿ ಎಂಬ ಸಂದೇಶವನ್ನು ಈ ಹೆಸರು ಸಾರುತ್ತದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಕನಸಿನ ದಾರಿಯಲ್ಲಿಯೇ ಸಿರಿ, ಎಸ್‌ಕೆಡಿಆರ್‌ಡಿಪಿ ಹಾಗೂ ರುಡ್‌ಸೆಟಿ ಸಂಸ್ಥೆಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಸುಮಾರು ಏಳು ಎಕರೆ ಪ್ರದೇಶದಲ್ಲಿ, 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಸಮೂಹ ಪರಿಶ್ರಮ, ಸಂಕಲ್ಪ ಮತ್ತು ಮಹಿಳಾ ಸಬಲೀಕರಣದ ಪ್ರತೀಕವಾಗಿದೆ ಎಂದು ಹೇಳಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮಾತನಾಡಿ, ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸ್ವಾವಲಂಬನೆಯ ಬದುಕು ನಿರ್ಮಾಣ ಮಾಡಲಾಗುತ್ತಿದೆ. ‘ಸಿರಿ’ಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಮತ್ತು ಸಾಮರ್ಥ್ಯ ಉದ್ಯೋಗಿಗಳಲ್ಲಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯಡಿ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರುಡ್‌ಸೆಟ್ ಸಂಸ್ಥೆಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಸಂಸ್ಥೆಗಳ ಸಂಘಟಿತ ಪ್ರಯತ್ನ, ಪರಿಶ್ರಮ ಮತ್ತು ಕನಸುಗಳ ಪ್ರತೀಕವೇ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಂಭಿಕ ಹಂತದಲ್ಲಿಯೇ ದೀರ್ಘಾವಧಿ ಮತ್ತು ಅಲ್ಪಾವಧಿ ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿರತೆಗೆ ಅಡಿಪಾಯ ಹಾಕಲಾಯಿತು. ಆ ಪ್ರಯತ್ನಗಳ ಮುಂದುವರೆದ ರೂಪವೇ ಇಂದು ಮಹಿಳಾ ಆರ್ಥಿಕ ಸಬಲೀಕರಣದ ಪ್ರತೀಕವಾಗಿ ಬೆಳೆದಿರುವ ‘ಸಿರಿ’ ಸಂಸ್ಥೆ ಎಂದರು.
ಸಿರಿ ಉದ್ಯೋಗಿಗಳು ಕೇವಲ ಸಂಸ್ಥೆಯ ಸಿಬ್ಬಂದಿಯಲ್ಲ, ಸಾವಿರಾರು ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸುವ ಪರಿವರ್ತನೆಯ ಹರಿಕಾರರು. ಅವರ ಗೌರವಯುತ ಬದುಕು, ಕುಟುಂಬದ ಸುಖ ಮತ್ತು ಮಕ್ಕಳ ಭವಿಷ್ಯವೇ ಸಂಸ್ಥೆಯ ಲಾಭಕ್ಕಿಂತ ಮುಖ್ಯ. ಸಿರಿಯನ್ನು ಲಾಭರಹಿತ ಸೇವಾ ಸಂಸ್ಥೆಯಾಗಿ ರೂಪಿಸಲಾಗಿದ್ದು, ಕಚ್ಚಾ ವಸ್ತುಗಳ ಪೂರೈಕೆ ಮತ್ತು ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗಿದೆ. ಇದರ ಫಲವಾಗಿ ‘ಸಿರಿ’ ಮಹಿಳಾ ಆರ್ಥಿಕ ಸಬಲೀಕರಣದ ಯಶಸ್ವಿ ಚಳುವಳಿಯಾಗಿ ಬೆಳೆದಿದೆ. ಗ್ರಾಮೀಣ ಮಹಿಳೆಯರ ಬದುಕಿಗೆ ಹೊಸ ಆಶಾಕಿರಣವಾಗಿರುವ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಹಾಗೂ ಗ್ರಾಮೀಣ ಪರಿವರ್ತನೆಗೆ ಮಾದರಿ ಆಗಲಿ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಎಸ್ ಡಿಎಂ ಸಂಸ್ಥಗಳ ಸುರೇಂದ್ರ ಕುಮಾರ್ , ಮಾತೋಶ್ರೀ ಹೇಮಾವತಿ ಹೆಗ್ಗಡೆ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಸೇರಿದಂತೆ ಹಲವರು ಇದ್ದರು.
ಸಿರಿ ಉತ್ಪನ್ನಗಳ ಮೂಲಕ ಮಹಿಳೆ ಬಲಿಷ್ಠ: ಉಪ ರಾಷ್ಟ್ರಪತಿ
ಅನೇಕ ಗ್ರಾಮಗಳಲ್ಲಿ ಮಹಿಳೆಯರು ಬೀಡಿ ಕಟ್ಟುವ ಕೆಲಸವನ್ನೇ ಜೀವನಾಧಾರವಾಗಿ ಮಾಡಿಕೊಂಡಿದ್ದರು. ಕೃಷಿ ಭೂಮಿ ಇದ್ದರೂ, ಆರ್ಥಿಕ ಸಂಕಷ್ಟ, ದಿನಗೂಲಿ ಅವಲಂಬನೆ ಹಾಗೂ ಕುಟುಂಬದ ಜವಾಬ್ದಾರಿಗಳಿಂದ ಕೃಷಿ ಚಟುವಟಿಕೆಗಳಿಗೆ ಸಮಯ ಮೀಸಲಿಡಲು ಸಾಧ್ಯವಾಗುತ್ತಿರಲಿಲ್ಲ. ಮದ್ಯಪಾನದ ದುಷ್ಪರಿಣಾಮಗಳಿಂದ ಕುಟುಂಬಗಳ ಹೊರೆ ಹೆಚ್ಚಾಗಿ ಮಹಿಳೆಯರ ಮೇಲೇ ಬಿದ್ದಿತ್ತು. ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ವಿಶಾಲ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಮೂಲಕ ‘ಸಿರಿ’ಯನ್ನು ಬಲಿಷ್ಠಗೊಳಿಸಲಾಯಿತು. ಮಹಿಳೆಯರ ನೋವಿಗೆ ಸ್ಪಂದನೆಯಾಗಿ ಆರಂಭವಾದ ಈ ಪ್ರಯತ್ನ ಇಂದು ಮಹಿಳಾ ಆರ್ಥಿಕ ಸಬಲೀಕರಣದ ಮಾದರಿಯಾಗಿದೆ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಮಹಿಳೆಯರ ಆಶಾಕಿರಣ ಸಿರಿ: ಕೆ.ಎನ್. ಜನಾರ್ದನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೆಳ್ತಂಗಡಿ ತಾಲ್ಲೂಕಿನ ರೆಂಕೆದಗುತ್ತು ಗ್ರಾಮದ ಬಳಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಿದ್ದು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಉದ್ಘಾಟನೆ ಮಾಡಿದ್ದಾರೆ. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಕನಸಿನ ಕೂಸು ‘ಸಿರಿ ಗ್ರಾಮೋದ್ಯೋಗ ಸಂಸ್ಥೆ’ 2004 ರಿಂದ ಕಾರ್ಯನಿರ್ವಹಿಸುತ್ತಿದೆ. ಒಂದು ಸಾವಿರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಇಲ್ಲಿ ಉದ್ಯೋಗಾವಕಾಶ ನೀಡಲಾಗಿದೆ ಎಂದು ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಅವರು ತಿಳಿಸಿದರು.
ಏಳು ಎಕರೆ ಜಾಗ ಖರೀದಿಸಿ, 71 ಕೋಟಿ ವೆಚ್ಚದಲ್ಲಿ 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ‘ಸಿರಿ’ ಸಂಸ್ಥೆಗೆ ಕಟ್ಟಡ ನಿರ್ಮಿಸಿ ಅದನ್ನು ಇಂಡಸ್ಟ್ರಿಯಲ್ ಪಾರ್ಕ್ ಆಗಿ ರೂಪಿಸಲಾಗಿದೆ. ‘ಸಿರಿ’ಯ ಎಲ್ಲಾ ಉತ್ಪನ್ನಗಳ ಉತ್ಪಾದನಾ ಘಟಕ ಗಳನ್ನು ಇಲ್ಲಿ ಪ್ರಾರಂಭಿಸಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಎಂದು ಹೇಳಿದರು.
ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಕೆ
ಉಪರಾಷ್ಟ್ರಪತಿ ಪಿ. ರಾಧಾಕೃಷ್ಣನ್ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದರ್ಶನ ಪಡೆದರು. ಈ ವೇಳೆ ಅವರು ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಿದ ಉಪ ರಾಷ್ಟ್ರಪತಿ ಬಳಿಕ ಕ್ಷೇತ್ರದ ಅನ್ನಪೂರ್ಣ ಛತ್ರಕ್ಕೆ ಭೇಟಿ ನೀಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಇದ್ದರು.
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕೆಲ ಕಾಲ ಚರ್ಚೆ ನಡೆಸಿದ ಉಪ ರಾಷ್ಟ್ರಪತಿ, ಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಹೈಲೈಟ್ಸ್
– ಗ್ರಾಮೀಣ ಮಹಿಳೆಯರ ಸಂಕಷ್ಟ ಕಂಡು ‘ಸಿರಿ’ ಪರಿಕಲ್ಪನೆಗೆ ಚಾಲನೆ
– 2004ರಲ್ಲಿ ಲಾಭರಹಿತ ಸೆಕ್ಷನ್-8 ಸಂಸ್ಥೆಯಾಗಿ ‘ಸಿರಿ’ ಸ್ಥಾಪನೆ
– ಕೃಷಿ, ಹೈನುಗಾರಿಕೆ ಮತ್ತು ಸ್ವ-ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನ
– ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ವ್ಯವಸ್ಥೆ
– 7 ಎಕರೆ ಪ್ರದೇಶದಲ್ಲಿ 1.50 ಲಕ್ಷ ಚದರ ಅಡಿ ವಿಸ್ತೀರ್ಣದ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣ
–ಮಹಿಳಾ ಆರ್ಥಿಕ ಸಬಲೀಕರಣದ ಹೊಸ ಅಧ್ಯಾಯಕ್ಕೆ ಮುನ್ನುಡಿ.
What do you feel about this post?
Like
Love
Happy
Haha
Sad
