ಮಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯ ನಡುವೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸಚಿವ ಸಂಪುಟಕ್ಕೆ ಕರಾವಳಿಯ ಹಿರಿಯ ಕಾಂಗ್ರೆಸ್ ನಾಯಕ ಯು.ಟಿ. ಖಾದರ್ ಅವರು ಸ್ಪೀಕರ್ ಟು ಮಿನಿಸ್ಟರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರು ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಕರಾವಳಿ ಭಾಗದ ಪ್ರಬಲ ನಾಯಕನಾಗಿರುವ ಖಾದರ್ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಯು.ಟಿ. ಖಾದರ್ ಅವರು 2007 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಕ್ಷೇತ್ರದ ಶಾಸಕರಾಗಿದ್ದ ಅವರ ತಂದೆ ದಿವಂಗತ ಯು.ಟಿ. ಫರೀದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಆರಂಭವಾದ ಅವರ ರಾಜಕೀಯ ಜರ್ನಿ ದಾಖಲೆ ಪಟ್ಟಿಗೆ ಸೇರಿದೆ.
2008, 2013, 2018 ಹಾಗೂ 2023ರ ವಿಧಾನಸಭಾ ಚುನಾವಣೆಗಳಲ್ಲೂ ಸತತ ಗೆಲುವು ಸಾಧಿಸಿರುವ ಅವರು ಐದು ಬಾರಿ ವಿಧಾನಸಭೆ ಪ್ರವೇಶಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. ಈ ಮೂಲಕ ಮಂಗಳೂರು ಕ್ಷೇತ್ರದ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗುವುದಕ್ಕೆ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಸ್ಪೀಕರ್ ಆಗಿ ಸದನದಲ್ಲಿ ಕಾರ್ಯ ನಿರ್ವಹಿಸಿದರು.
1969ರ ಅಕ್ಟೋಬರ್ 12ರಂದು ಕಾಸರಗೋಡಿನ ಉಪ್ಪಳದಲ್ಲಿ ಜನಿಸಿದ ಯು.ಟಿ. ಖಾದರ್ ಅವರು ನಸೀಮಾ ಹಾಗೂ ಮಾಜಿ ಶಾಸಕ ಯು.ಟಿ. ಫರೀದ್ ದಂಪತಿ ಪುತ್ರ. ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿರುವ ಅವರು ವಿದ್ಯಾರ್ಥಿ ಜೀವನದಲ್ಲೇ ಯುವ ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.
2013ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಖಾದರ್ ಅವರು ಆರೋಗ್ಯಶ್ರೀ, 108 ಅಂಬುಲೆನ್ಸ್ ಹಾಗೂ ಬೈಕ್ ಅಂಬುಲೆನ್ಸ್ ಸೇವೆಗಳ ವಿಸ್ತರಣೆಯಲ್ಲಿ ಗಮನ ಸೆಳೆದಿದ್ದರು. ಬಳಿಕ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2018-19ರಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಅವರು, 2021ರಿಂದ 2023ರವರೆಗೆ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿದ್ದರು. ನಂತರ ವಿಧಾನಸಭಾಧ್ಯಕ್ಷರಾಗಿ ಸುಮಾರು ಮೂರು ವರ್ಷಗಳ ಕಾಲ ಯಶಸ್ವಿಯಾಗಿ ಸದನದ ಕಾರ್ಯವೈಖರಿಯನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಹೈಲೈಟ್ಸ್
* ಡಿ.ಕೆ. ಶಿವಕುಮಾರ್ ಸಂಪುಟಕ್ಕೆ ಯು.ಟಿ. ಖಾದರ್ ಸೇರ್ಪಡೆ
* ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ
* 2007 ರಿಂದ ನಿರಂತರವಾಗಿ ಗೆಲುವಿನ ಓಟ
* ಐದು ಬಾರಿ ಶಾಸಕರಾಗಿ ಆಯ್ಕೆ
* ಆರೋಗ್ಯ, ಆಹಾರ ಪೂರೈಕೆ ಹಾಗೂ ನಗರಾಭಿವೃದ್ಧಿ ಸಚಿವರಾಗಿ ಅನುಭವ
* ಸ್ಪೀಕರ್ ಆಗಿ ಯಶಸ್ವಿ ಆಡಳಿತ
What do you feel about this post?
Like
Love
Happy
Haha
Sad
