ಮಂಗಳೂರು: ಚೆಕ್ ಅಮಾನ್ಯ ಪ್ರಕರಣದಲ್ಲಿ ಮಂಗಳೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯ ನೀಡಿದ್ದ ಖುಲಾಸೆ ತೀರ್ಪ ಅನ್ನು ರದ್ದುಗೊಳಿಸಿರುವ ಮಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯ, ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ಚೆಕ್ ಮೊತ್ತದ ದುಪ್ಪಟ್ಟು ಪರಿಹಾರವನ್ನು ಬ್ಯಾಂಕ್‌ಗೆ ಪಾವತಿಸುವಂತೆ ಆದೇಶ ನೀಡಿದೆ.
ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಕೆ. ಲಕ್ಷ್ಮೀನಾರಾಯಣ ಭಟ್ ಅವರು ಈ ತೀರ್ಪು ನೀಡಿದ್ದು, ಮರೋಳಿ ನಿವಾಸಿ ಗುರುರಾಜ್ ಹಾಗೂ ಅವರ ಪತ್ನಿ ಲಕ್ಷ್ಮೀ ಗುರುರಾಜ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಕ್ರಮವಾಗಿ 1 ಲಕ್ಷ ಮತ್ತು 75 ಸಾವಿರ ಸಾಲ ಪಡೆದಿದ್ದರು. ಸಾಲವನ್ನು ನಿಗದಿತ ಅವಧಿಯಲ್ಲಿ ಮರು ಪಾವತಿಸದ ಹಿನ್ನೆಲೆಯಲ್ಲಿ ಗುರುರಾಜ್ ಎರಡು ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡಿದ್ದರು.
ಬ್ಯಾಂಕ್ ಚೆಕ್‌ಗಳನ್ನು ನಗದೀಕರಣಕ್ಕೆ ಸಲ್ಲಿಸಿದಾಗ, ಎರಡೂ ಚೆಕ್‌ಗಳು‘ಖಾತೆ ಮುಕ್ತಾಯಗೊಂಡಿದೆ’ಎಂಬ ಕಾರಣದಿಂದ ಅಮಾನ್ಯಗೊಂಡಿದ್ದವು. ಬಳಿಕ ಬ್ಯಾಂಕ್ ಕಾನೂನು ನೋಟಿಸ್ ಜಾರಿಗೊಳಿಸಿ ಮಂಗಳೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಗುರುರಾಜ್ ಅವರನ್ನು ಎರಡೂ ಪ್ರಕರಣಗಳಲ್ಲಿ ಖುಲಾಸೆಗೊಳಿಸಿತ್ತು. ಈ ತೀರ್ಪ ಅನ್ನು ಪ್ರಶ್ನಿಸಿ ಬ್ಯಾಂಕ್ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿಯ ವಿಚಾರಣೆ ನಡೆಸಿದ ಪ್ರಧಾನ ಕೌಟುಂಬಿಕ ನ್ಯಾಯಾಲಯ, ಕೆಳ ನ್ಯಾಯಾಲಯದ ಖುಲಾಸೆ ತೀರ್ಪನ್ನು ರದ್ದುಗೊಳಿಸಿ ಬ್ಯಾಂಕ್‌ನ ಮೇಲ್ಮನವಿಯನ್ನು ಪುರಸ್ಕರಿಸಿತು. ಜತೆಗೆ, ಆರೋಪಿಯು ನೀಡಿದ್ದ ಚೆಕ್‌ಗಳ ಮೊತ್ತದ ದುಪ್ಪಟ್ಟು ಹಣವನ್ನು ಪರಿಹಾರವಾಗಿ ಪಾವತಿಸುವಂತೆ ಆದೇಶ ನೀಡಿತು.
ಎರಡು ಪ್ರಕರಣದಲ್ಲಿ 2.74 ಲಕ್ಷ ಹಾಗೂ ಮತ್ತೊಂದು ಪ್ರಕರಣದಲ್ಲಿ 2.60 ಲಕ್ಷವನ್ನು ಬ್ಯಾಂಕ್‌ಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಮೇಲ್ಮನವಿದಾರ ಬ್ಯಾಂಕ್ ಪರವಾಗಿ ವಕೀಲ ಸುಕೇಶ್ ಕುಮಾರ್ ಶೆಟ್ಟಿ ಅವರು ವಾದ ಮಂಡಿಸಿದ್ದರು.
What do you feel about this post?
Like
Love
Happy
Haha
Sad



