ಕಾರವಾರ: ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುವ ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಮಕ್ಕಳಿಗೆ ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಸುರಕ್ಷಿತ ಬಾಲ್ಯ ದೊರಕುವಂತೆ ಮಾಡಲು ಬಾಲ ಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಕಾಜುಬಾಗದ ಸಂತ ಜೋಸೆಫ್ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕರು ಕೆಲಸ ಮಾಡುವ ಬದಲು ಶಿಕ್ಷಣ ಪಡೆಯುವಂತಾಗಬೇಕು. ಎಲ್ಲಿಯಾದರೂ ಬಾಲ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡುಬಂದರೆ ಮಕ್ಕಳ ಸಹಾಯವಾಣಿ 1098, ಪೊಲೀಸ್ ಇಲಾಖೆ ಅಥವಾ ಸಮೀಪದ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ಬಡತನ ಮತ್ತು ವಲಸೆ ಸಮಸ್ಯೆಗಳ ಪರಿಣಾಮವಾಗಿ ಅನೇಕ ಮಕ್ಕಳು ಬಾಲ ಕಾರ್ಮಿಕತೆಯತ್ತ ದೂಡಲ್ಪಡುತ್ತಿದ್ದು, ಕಾರ್ಖಾನೆಗಳು, ಹೋಟೆಲ್‌ಗಳು ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಲಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಮಾತನಾಡಿ, ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ ಎಂದರು.
ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಮೂಲಕ ಇದುವರೆಗೆ ಒಟ್ಟು 32 ಮಕ್ಕಳನ್ನು ರಕ್ಷಿಸಲಾಗಿದೆ. ಇವರಲ್ಲಿ 4 ಬಾಲ ಕಾರ್ಮಿಕರು ಹಾಗೂ 28 ಕಿಶೋರ ಕಾರ್ಮಿಕರು ಸೇರಿದ್ದಾರೆ. 16 ಮಕ್ಕಳು ಅಪಾಯಕಾರಿ ಮತ್ತು 16 ಮಕ್ಕಳು ಅಪಾಯಕಾರಿ ಅಲ್ಲದ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿತ್ತು ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಬಾಲ ಕಾರ್ಮಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಎಫ್‌ಐಆರ್‌ಗಳು ದಾಖಲಾಗಿದ್ದು, 23 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲೆಯಾಗಿವೆ. ಇದರಲ್ಲಿ 16 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಮಾಲೀಕರಿಗೆ ಒಟ್ಟು 3.14 ಲಕ್ಷ ದಂಡ ವಿಧಿಸಲಾಗಿದೆ. ಉಳಿದ 7 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ ಎಂದು ತಿಳಿಸಿದರು.
ಕಾರ್ಮಿಕ ನಿರೀಕ್ಷಕ ಡಿ.ಎಂ. ವೆಂಕಟೇಶಬಾಬು ವಿಶೇಷ ಉಪನ್ಯಾಸ ನೀಡಿ, 14 ವರ್ಷ ಮೇಲ್ಪಟ್ಟು 18 ವರ್ಷದೊಳಗಿನ ಮಕ್ಕಳನ್ನು ಕಿಶೋರ ಕಾರ್ಮಿಕರು ಎಂದು ಪರಿಗಣಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚುನಾವಣಾ ಶಾಖೆಯ ತಹಶೀಲ್ದಾರ್ ಪ್ರಮೋದ ನಾಯ್ಕ, ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಎನ್., ಸಂತ ಜೋಸೆಫ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ರೆ. ಡಾ. ಸ್ಟ್ಯಾನಿ ಪಿಂಟೊ, ಯಲ್ಲಾಪುರ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
What do you feel about this post?
Like
Love
Happy
Haha
Sad
