ಮಂಗಳೂರು: ಗುತ್ತಿಗೆದಾರರೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಅಶ್ಲೀಲ ವಿಡಿಯೊ ಹಾಗೂ ಫೋಟೊಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೇರಿ ಇಬ್ಬರನ್ನು ಉರ್ವ ಪೊಲೀಸರು ಬಂಧನ ಮಾಡಿದ್ದಾರೆ.
ಗುತ್ತಿಗೆದಾರರ ಜತೆಗೆ ಕೆಲಸ ಮಾಡುತ್ತಿದ್ದ ಜಿತೇಶ್ ಹಾಗೂ ನಿಜಾಮ್ ಯಾನೆ ಇಬ್ರಾಹಿಂ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಜಾಮ್ ಅವರನ್ನು ಯುವ ಕಾಂಗ್ರೆಸ್ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗುತ್ತಿಗೆದಾರನೊಂದಿಗೆ ಆಪ್ತ ಸಂಪರ್ಕ ಹೊಂದಿದ್ದ ಜಿತೇಶ್ ಗುಪ್ತವಾಗಿ ವಿಡಿಯೊ ಚಿತ್ರೀಕರಣ ಮಾಡಿದ್ದ ಎನ್ನಲಾಗಿದೆ. ಬಳಿಕ ಅಶ್ಲೀಲ ವಿಡಿಯೊ ಮತ್ತು ಫೋಟೊಗಳು ತಮ್ಮ ಬಳಿ ಇವೆ ಎಂದು ಹೇಳಿ 2024 ರಿಂದಲೇ ಗುತ್ತಿಗೆದಾರನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.
ಪ್ರಾರಂಭದಲ್ಲಿ ಜಿತೇಶ್ ಒಬ್ಬನೇ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತ ಗುತ್ತಿಗೆದಾರ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದ ನಿಜಾಮ್ ನೆರವು ಕೋರಿದ್ದರು. ಆದರೆ, ನೆರವು ನೀಡುವ ಬದಲು ನಿಜಾಮ್ ಕೂಡ ಜಿತೇಶ್ ಜತೆ ಕೈಜೋಡಿಸಿ ಗುತ್ತಿಗೆದಾರನಿಂದ ಹಣ ವಸೂಲಿ ಮಾಡಲು ಆರಂಭಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಇದರ ನಡುವೆ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೆತ್‌ನೋಟ್‌ನಲ್ಲಿ ನಿಮ್ಮ ಹೆಸರಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಜೈಲು ಶಿಕ್ಷೆ ಖಚಿತ ಎಂದು ಬೆದರಿಕೆ ಹಾಕಿದ್ದ ನಿಜಾಮ್, ಬ್ಲ್ಯಾಕ್‌ಮೇಲ್ ಮುಂದುವರೆದ್ದು, ಇಬ್ಬರು ಸೇರಿ ಗುತ್ತಿಗೆದಾರನಿಂದ ಬರೋಬ್ಬರಿ 2.57 ಕೋಟಿ ರೂ. ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಜಿತೇಶ್ ನಗರದಲ್ಲಿ ಓಡಾಡುತ್ತಿರುವುದನ್ನು ಗುತ್ತಿಗೆದಾರ ಗಮನಿಸಿದ್ದು, ತಾನು ಮೋಸಕ್ಕೊಳಗಾಗಿರುವುದು ಗೊತ್ತಾದ ಬಳಿಕ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹುದ್ದೆಯಿಂದ ಉಚ್ಚಾಟನೆ
ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮ್ ವಿರುದ್ಧ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪಕ್ಷದ ಗೌರವ ಹಾಗೂ ಶಿಸ್ತಿಗೆ ಧಕ್ಕೆಯಾಗಿದೆ. ಈ ಕಾರಣದಿಂದ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಗ್ರ ತನಿಖೆಗೆ ಅಧ್ಯಕ್ಷ ನಂದನ್ ಮಲ್ಯ ಆಗ್ರಹ
ಪ್ರಕರಣದ ಕುರಿತು ಶೀಘ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಗ್ರಹಿಸಿದೆ. ಪ್ರಕರಣದ ಹಿಂದೆ ಬೇರೆ ಯಾವುದೇ ಪ್ರಭಾವಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಇದೆಯೇ ಹಾಗೂ ಹಣದ ವ್ಯವಹಾರದಲ್ಲಿ ಇತರರ ಪಾತ್ರವಿದೆಯೇ ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಒತ್ತಾಯಿಸಿದ್ದಾರೆ.
What do you feel about this post?
Like
Love
Happy
Haha
Sad
