ಮಂಗಳೂರು: ಬಿಜೆಪಿಯು ವೋಟ್ ಚೋರಿ ಜತೆಗೆ ಸೀಟ್ ಚೋರಿಯನ್ನೂ ನಡೆಸುತ್ತಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕರಿಸಿರುವ ಕ್ರಮ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ ಎಂದರು.
ಜಾರ್ಖಂಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ನಾಮಪತ್ರದ ದೋಷ ಸರಿಪಡಿಸಲು ಅವಕಾಶ ನೀಡಿದ್ದರೂ, ಮೀನಾಕ್ಷಿ ನಟರಾಜನ್ ಅವರಿಗೆ ಅದೇ ಅವಕಾಶ ನಿರಾಕರಿಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅನ್ಯಾಯ ಎಂದು ಅವರು ಟೀಕಿಸಿದರು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯರ ರಾಜೀನಾಮೆ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುವ ಮೂಲಕ ಸರ್ವಾಧಿಕಾರಿ ಆಡಳಿತದತ್ತ ಬಿಜೆಪಿ ಸಾಗುತ್ತಿದೆ ಎಂದು ಆರೋಪಿಸಿದರು. ಈ ಧೋರಣೆ ವಿರೋಧಿಸಿ ಕಾಂಗ್ರೆಸ್ ಮೂರು ತಿಂಗಳ ಕಾಲ ದೇಶವ್ಯಾಪಿ ಹೋರಾಟ ನಡೆಸಲಿದ್ದು, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಪ್ರತಿಭಟನೆಗಳು ನಡೆಯಲಿವೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಪ್ರಕ್ರಿಯೆಗೆ ಸಹಕಾರ ನೀಡುತ್ತಿದೆ. ಆದರೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲ್ಪಟ್ಟಿರುವ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ನಡೆದಿದ್ದು, ನಕಲಿ ಮತದಾರರು ಹಾಗೂ ಪಟ್ಟಿಯಿಂದ ಕೈಬಿಟ್ಟವರ ಕುರಿತು ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ಹೇಳಿದರು.
ಮುಖಂಡರಾದ ನವೀನ್ ಡಿಸೋಜ, ಶಾಂತಲಾ ಗಟ್ಟಿ, ನವಾಜ್, ಪ್ರಕಾಶ್ ಸಾಲಿಯನ್, ನಾಗೇಂದ್ರ ಕಂಬಳಿ, ಇಮ್ರಾನ್, ಮನುರಾಜ್, ಆನಂದ ಸೋನ್ಸ್, ಭಾಸ್ಕರ್ ಇದ್ದರು.
What do you feel about this post?
Like
Love
Happy
Haha
Sad
