ಉ.ಕ ಜಿ.ಪಂ ಕರಡು ಯೋಜನೆಗೆ ಸುಷ್ಮಾ ಗೋಡಬೋಲೆ ಅನುಮೋದನೆ, 1,34,819.86 ಲಕ್ಷ ಆಯವ್ಯಯಕ್ಕೆ ಹಸಿರು ನಿಶಾನೆ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಟ್ಟು ₹1,34,819.86 ಲಕ್ಷ ಮೊತ್ತದ ಕರಡು ಆಯವ್ಯಯ ಯೋಜನೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಸುಷ್ಮಾ ಗೋಡಬೋಲೆ ಅನುಮೋದನೆ ನೀಡಿದರು.

<

ಮಂಗಳವಾರ ಜಿಲ್ಲಾ ಪಂಚಾಯತ್ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಾಮಾನ್ಯ ಸಭೆ ಹಾಗೂ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಈ ಅನುಮೋದನೆ ನೀಡಿದರು.

ಜಿಲ್ಲಾ ಪಂಚಾಯತ್‌ನ ವಿವಿಧ ಕಾರ್ಯಕ್ರಮಗಳಿಗೆ 40,240.75 ಲಕ್ಷ ಹಾಗೂ ತಾಲೂಕು ಪಂಚಾಯತ್‌ನ ವಿವಿಧ ಯೋಜನೆಗಳಿಗೆ 94,579.11 ಲಕ್ಷ ಆಯವ್ಯಯಕ್ಕೆ ಒಪ್ಪಿಗೆ ನೀಡಲಾಯಿತು.

ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವಂತೆ ಸೂಚಿಸಿದ ಅವರು, ಪತ್ರಿಕಾ ಪ್ರಕಟಣೆಗಳ ಮೂಲಕ ಅರ್ಜಿಗಳನ್ನು ಆಹ್ವಾನಿಸಿ, ಜಿಲ್ಲಾ ಪಂಚಾಯತ್ ಸಮಿತಿ ಸಭೆಯಲ್ಲಿ ನಿಯಮಾನುಸಾರ ಅರ್ಹರನ್ನು ಆಯ್ಕೆ ಮಾಡಬೇಕು. ಯೋಜನೆಗಳ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ತಲುಪಿಸಲು ಆಕಾಶವಾಣಿ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನಡೆಸುವಂತೆಯೂ ಸೂಚಿಸಿದರು.

ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಆಡಿಯೋಗ್ರಾಮ್ ಹಾಗೂ ಆಡಿಯೋಮೆಟ್ರಿ ಪರೀಕ್ಷೆ ನಡೆಸಿ, ಅವರ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿದ ಶ್ರವಣ ಸಾಧನಗಳನ್ನು ಮಾತ್ರ ವಿತರಿಸಬೇಕು ಎಂದು ನಿರ್ದೇಶಿಸಿದರು. ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ವಿಶೇಷ ಶಾಲೆಗಳ ಶಿಕ್ಷಕರ ಗೌರವಧನ ಹಾಗೂ ಇತರ ಪಾವತಿಗಳನ್ನು ಪ್ರತಿ ತಿಂಗಳು ವಿಳಂಬವಿಲ್ಲದೆ ಬಿಡುಗಡೆ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಸತಿ ಶಾಲೆಗಳಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಪ್ರಾಂಶುಪಾಲರು ಹಾಗೂ ವಾರ್ಡನ್‌ಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ಸ್ವಚ್ಛತೆ ಹಾಗೂ ಹೈಜೀನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಸೂಚಿಸಿದರು.

ಅಂಗನವಾಡಿ ಕೇಂದ್ರಗಳು, ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ನ್ಯೂಟ್ರಿ ಗಾರ್ಡನ್ ಅಭಿವೃದ್ಧಿಪಡಿಸಿ, ಅಲ್ಲಿ ಬೆಳೆಯುವ ತರಕಾರಿಗಳನ್ನು ಮಧ್ಯಾಹ್ನದ ಊಟ ಹಾಗೂ ಆಹಾರ ತಯಾರಿಕೆಗೆ ಬಳಸುವಂತೆ ಸಲಹೆ ನೀಡಿದರು. ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಎನ್‌ಆರ್‌ಸಿ ಕೇಂದ್ರಗಳಿಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಒದಗಿಸುವ ಜೊತೆಗೆ, ಮಕ್ಕಳ ಪೌಷ್ಟಿಕತೆ ಹಾಗೂ ಅಂಗನವಾಡಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಬ್ಯಾಂಕುಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಿಎಸ್‌ಆರ್ ನಿಧಿಯನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ಯುವಜನರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿಗೆ ಒತ್ತು ನೀಡುವಂತೆ ಸೂಚಿಸಿದ ಅವರು, ಸಾಂಪ್ರದಾಯಿಕ ಹೊಲಿಗೆ ಹಾಗೂ ಕರಕುಶಲ ತರಬೇತಿಗಳ ಜೊತೆಗೆ ಜೆರಾಕ್ಸ್ ಅಂಗಡಿ ನಿರ್ವಹಣೆ, ಹಾಸ್ಪಿಟಾಲಿಟಿ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ಸೇರಿದಂತೆ ಬೇಡಿಕೆಯ ಕ್ಷೇತ್ರಗಳಲ್ಲಿ ರೂಡ್‌ಸೆಟ್ ಸಂಸ್ಥೆಯ ಸಹಯೋಗದೊಂದಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕರಡು ಯೋಜನೆಯಲ್ಲಿ ಶಿಕ್ಷಣ, ಗ್ರಾಮೀಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಗ್ರಾಮೀಣ ನೀರು ಪೂರೈಕೆ, ಕ್ರೀಡೆ, ಸಾಮಾಜಿಕ ಅರಣ್ಯ, ಸಹಕಾರ, ಪಂಚಾಯತ್ ರಾಜ್ ಸಂಸ್ಥೆಗಳು, ಸಣ್ಣ ನೀರಾವರಿ, ಗ್ರಾಮೋದ್ಯಮ, ಕೈಮಗ್ಗ ಮತ್ತು ಜವಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಅಭಿವೃದ್ಧಿ ವಲಯಗಳಿಗೆ ಅನುದಾನ ಮೀಸಲಿರಿಸಲಾಗಿದೆ.

ಸಭೆಯಲ್ಲಿ ವರ್ಚುವಲ್ ಮೂಲಕ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದೀಲಿಷ್ ಶಶಿ, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *