ಕಾರವಾರ: ತುಮಕೂರು ಸಮೀಪದಲ್ಲಿ ಕಾರಿನಲ್ಲಿ ನಾಡಬಾಂಬ್ ಸ್ಫೋಟಗೊಂಡು ಅಂಕೋಲಾ ಮೂಲದ ನಾಗೇಂದ್ರ ಗೌಡ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸರು ನಾಲ್ಕು ಮಂದಿಯನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ನಾಡಬಾಂಬ್ ತಯಾರಿಕೆ ಮತ್ತು ಪೂರೈಕೆ ಜಾಲದ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದೀಗ ನಾಡಬಾಂಬ್ ಪ್ರಕರಣವೂ ಇಡಿ ಜಿಲ್ಲೆಯಲ್ಲಿಯೇ ಸಂಚಲನಕ್ಕೆ ಕಾರಣ ಆಗಿದೆ. ಪೊಲೀಸ್ ಮೂಲಗಳ ಪ್ರಕಾರ, ವಶಕ್ಕೆ ಪಡೆದಿರುವ ನಾಲ್ಕು ಮಂದಿಯಲ್ಲಿ ಮೂರು ಮಂದಿ ಮೃತ ನಾಗೇಂದ್ರ ಗೌಡನ ಸಂಬಂಧಿಕರು ಎಂದು ತಿಳಿದು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸರಳೆಬೈಲ್ ಗ್ರಾಮದ ನಿವಾಸಿಗಳಾಗಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿ ಹೊನ್ನಾವರ ತಾಲೂಕಿನವರಾಗಿದ್ದು, ನಾಗೇಂದ್ರ ಗೌಡನಿಗೆ ನಾಡಬಾಂಬ್ ಸಿದ್ಧಪಡಿಸಿ ನೀಡಿದ್ದಾನೆ ಎಂಬ ಶಂಕೆಯ ಮೇಲೆ ವಶಕ್ಕೆ ಪಡೆಯಲಾಗಿದೆ.
ಪ್ರಕರಣವನ್ನು ಪತ್ತೆ ಹಚ್ಚುವ ಉದ್ದೇಶದಿಂದ ಅಂಕೋಲಾ ಪೊಲೀಸರು ಮೂರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ತನಿಖೆ ಭಾಗವಾಗಿ ನಾಲ್ಕು ಮಂದಿಯನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದ್ದು, ಬಾಂಬ್ ತಯಾರಿಕೆ, ಸಾಗಣೆ ಮತ್ತು ಪೂರೈಕೆಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜೂನ್ 27 ರಂದು ತುಮಕೂರು ಸಮೀಪ ಸಂಚರಿಸುತ್ತಿದ್ದ ಕಾರಿನೊಳಗೆ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ನಾಗೇಂದ್ರ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದ. ಬಾಂಬ್ ಎಲ್ಲಿಂದ ತರಲಾಯಿತು, ಯಾರು ತಯಾರಿಸಿದರು, ಅದರ ಹಿಂದೆ ಯಾವುದೇ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಹಾಗೂ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ವಶಕ್ಕೆ ಪಡೆದಿರುವ ನಾಲ್ಕು ಮಂದಿ ಆರೋಪಿಗಳ ವಿಚಾರಣೆ ನಡೆದ ನಂತರವಷ್ಟೇ ಪ್ರಕರಣದ ಕುರಿತು ತಿಳಿದು ಬರಲಿದೆ. ಒಟ್ಟಾರೆ ನಾಡಬಾಂಬ್ ಸ್ಪೋಟ ಪ್ರಕರಣಕ್ಕೂ ಉತ್ತರ ಕನ್ನಡ ಜಿಲ್ಲೆಗೆ ಯಾವ ಸಂಬಂಧ ಇದೆ ಎಂಬುದು ತಿಳಿದು ಬರಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪುಲ್ ಅಲರ್ಟ್ ಆಗಿದ್ದಾರೆ.
What do you feel about this post?
Like
Love
Happy
Haha
Sad



