ಪಾಲೇಮಾರ್ ಕನ್ವೆನ್ಶನ್ ಸೆಂಟರ್ ಸೇರಿ ನಾಲ್ಕು ಸಭಾಭವನಗಳ ಲೋಕಾರ್ಪಣೆ ಮಾಡಿದ ರಾಜ್ಯಪಾಲ ಅಬ್ದುಲ್ ನಜೀರ್

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ
<

Spread the love

ಮಂಗಳೂರು: ಬಡತನ ನಿರ್ಮೂಲನೆ ಹಾಗೂ ಸಮಾಜದಲ್ಲಿ ಸಮಾನತೆ ಸ್ಥಾಪನೆಗೆ ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಆಂಧ್ರಪ್ರದೇಶ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಹೇಳಿದರು.

<

ನಗರದ ಮೇರಿಹಿಲ್‌ನ ಪಾಲೇಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಲ್ಯಾಂಡ್ ಲಿಂಕ್ಸ್ ಸಂಸ್ಥೆಯಿಂದ ನಿರ್ಮಿಸಲಾದ ಅತ್ಯಾಧುನಿಕ ಸೌಲಭ್ಯಗಳ ನಾಲ್ಕು ಭವ್ಯ ಸಭಾಭವನಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಬಹುಮುಖ ಪ್ರತಿಭೆಯ ವ್ಯಕ್ತಿ. ಕೈಗಾರಿಕೆ, ನಿರ್ಮಾಣ, ಶಿಕ್ಷಣ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿರುವುದು ಶ್ಲಾಘನೀಯ. ಪಾಲೇಮಾರ್ ಕನ್ವೆನ್ಶನ್ ಸೆಂಟರ್ ಸಮಾಜದಲ್ಲಿ ಸೌಹಾರ್ದತೆ, ಜಾಗೃತಿ ಹಾಗೂ ಕೌಶಲಭಿವೃದ್ಧಿಗೆ ವೇದಿಕೆಯಾಗಲಿ ಎಂದರು.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದೊಡ್ಡ ಸಾಧನೆ ಸಾಧ್ಯ ಎಂಬುದಕ್ಕೆ ಕೃಷ್ಣ ಪಾಲೇಮಾರ್ ಅವರ ಬದುಕೇ ಉದಾಹರಣೆ. ಒಂದೇ ಸಂದರ್ಭದಲ್ಲಿ ನಾಲ್ಕು ಸಭಾಭವನಗಳನ್ನು ಉದ್ಘಾಟಿಸಿ, ಅದರ ಆದಾಯವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಸಂಕಲ್ಪ ಅಪೂರ್ವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಾತನಾಡಿ, ತುಳುನಾಡಿನ ಸಾಂಸ್ಕೃತಿಕ ಸೊಬಗಿಗೆ ಪಾಲೇಮಾರ್ ಕನ್ವೆನ್ಶನ್ ಸೆಂಟರ್ ಹೊಸ ಮೆರುಗು ನೀಡಿದೆ. ಸಣ್ಣ ಸಮುದಾಯದಿಂದ ಬಂದವರಾಗಿದ್ದರೂ ಬದ್ಧತೆ ಮತ್ತು ಪರಿಶ್ರಮದಿಂದ ದೊಡ್ಡ ಸಾಧನೆ ಸಾಧ್ಯ ಎಂಬುದನ್ನು ಪಾಲೆಮಾರ್ ತೋರಿಸಿದ್ದಾರೆ. ಅವರ ಜೀವನ ಯುವಜನತೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲ್ಯಾಂಡ್ ಲಿಂಕ್ಸ್ ಗ್ರೂಪ್ ಅಧ್ಯಕ್ಷ ಕೃಷ್ಣ ಜೆ. ಪಾಲೇಮಾರ್ ಅವರು ಮಾತನಾಡಿ, ಕರಾವಳಿಯ ಜನರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಸೌಲಭ್ಯಗಳ ಸಭಾಂಗಣ ಒದಗಿಸುವುದು ಸಂಸ್ಥೆಯ ಉದ್ದೇಶ. ಪಾಲೇಮಾರ್ ಕನ್ವೆನ್ಶನ್ ಸೆಂಟರ್ ವಿಕಾಸ್ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಲಿದೆ ಎಂದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಏಕಕಾಲಕ್ಕೆ ನಾಲ್ಕು ಸಭಾಭವನ ಉದ್ಘಾಟನೆ

ಮೇರಿಹಿಲ್‌ನ ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್, ಸುರತ್ಕಲ್ ಸಮೀಪದ ಪಾಲೆಮಾರ್ ಫಾರ್ಮ್ಸ್ ಸಭಾಭವನ ಹಾಗೂ ಜೆಪ್ಪಿನಮೊಗರು ಕಡೆಕಾರ್‌ನ ನೇತ್ರಾವತಿ ಸಭಾಭವನಗಳನ್ನು ಏಕಕಾಲದಲ್ಲಿ ಉದ್ಘಾಟಿಸಲಾಯಿತು. ಈ ಸಭಾಭವನಗಳು ವಿವಾಹ, ಸಾಮೂಹಿಕ ವಿವಾಹ, ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮ, ಉದ್ಯೋಗ ಮೇಳ, ವಸ್ತು ಪ್ರದರ್ಶನ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ಮುಕ್ತವಾಗಿರಲಿವೆ ಎಂದು ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು.

What do you feel about this post?

0%
like

Like

100%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *