ಸಹ್ಯಾದ್ರಿಯಲ್ಲಿ ಇಂಡಸ್ಟ್ರಿ ಇಂಟಿಗ್ರೇಟೆಡ್ ಸೆಂಟರ್ ಉದ್ಘಾಟನೆ, ಕೌಶಲ್ಯಾಭಿವೃದ್ಧಿಗೆ ಆದ್ಯತೆ: ಸಚಿವ ಡಾ. ಶರಣಪ್ರಕಾಶ್

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ಪದವೀಧರರಲ್ಲಿ ಹೆಚ್ಚುತ್ತಿರುವ ಕೌಶಲ್ಯ ಅಂತರವನ್ನು ನಿವಾರಿಸಲು ಕೈಗಾರಿಕಾ–ಸಂಯೋಜಿತ ಕೇಂದ್ರಗಳು ಪರಿಣಾಮಕಾರಿಯಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.

ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ವಿವಿಧ ಇಂಡಸ್ಟ್ರಿ ಇಂಟಿಗ್ರೇಟೆಡ್ ಸೆಂಟರ್‌ಗಳನ್ನು ಶನಿವಾರ ಅವರು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಪಠ್ಯಕ್ರಮ ಪುನರ್‌ರಚನೆಗೆ ಕ್ರಮ ಕೈಗೊಂಡಿದೆ. ಸಹ್ಯಾದ್ರಿ ಕಾಲೇಜು ಹಲವು ಪ್ರಗತಿಪರ ಮಾದರಿಗಳನ್ನು ಈಗಾಗಲೇ ಅಳವಡಿಸಿಕೊಂಡಿದೆ. ಡಿಸ್ಕವರ್ ಡಾಲರ್, ಎಂಆರ್ ರಿಸಲ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆಲ್‌ಕಾರ್ಗೋ ಗ್ರೂಪ್ ಸಹಯೋಗದಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಸಹ್ಯಾದ್ರಿ ಕಾಲೇಜನ್ನು ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ರೂಪಿಸಿರುವ ಅಧ್ಯಕ್ಷ ಮಂಜುನಾಥ್ ಭಂಡಾರಿ ಅವರ ಕಾರ್ಯವನ್ನು ಅವರು ಶ್ಲಾಘಿಸಿದರು.

ಆಲ್‌ಕಾರ್ಗೋ ಗ್ರೂಪ್ ಅಧ್ಯಕ್ಷ ಶಶಿ ಕಿರಣ್ ಶೆಟ್ಟಿ ಮಾತನಾಡಿ, ಮುಂದಿನ ವರ್ಷಗಳಲ್ಲಿ ಭಾರತ ಜಾಗತಿಕ ಕಾರ್ಯಪಡೆಯ ಪ್ರಮುಖ ಕೇಂದ್ರವಾಗಲಿದ್ದು, ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ. ಸಹ್ಯಾದ್ರಿ ಅಳವಡಿಸಿಕೊಂಡಿರುವ ನವೀನ ಶಿಕ್ಷಣ ಮಾದರಿಯನ್ನು ಇತರ ಸಂಸ್ಥೆಗಳೂ ಅನುಸರಿಸಬೇಕು ಎಂದು ಹೇಳಿದರು.

ಐಐಎಂ ಮುಂಬೈನ ಪ್ರೊ. ವಿವೇಕಾನಂದ ಖಾನಪುರಿ ಅವರು ಮಾತನಾಡಿ, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ನಿರ್ವಹಣಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಅಪಾರ ಅವಕಾಶಗಳಿವೆ. ಶಿಕ್ಷಣದ ಜೊತೆಗೆ ನೈಜ ಉದ್ಯಮ ಸಮಸ್ಯೆಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಸಂಯೋಜಿಸಿರುವುದು ಸಹ್ಯಾದ್ರಿಯ ವಿಶೇಷತೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಡಾ. ಮಂಜುನಾಥ್ ಭಂಡಾರಿ ಅವರು ಮಾತನಾಡಿ, ಉದ್ಯಮ–ಸಂಯೋಜಿತ ಶಿಕ್ಷಣ ಮತ್ತು ಕೌಶಲ್ಯಾಧಾರಿತ ತರಬೇತಿಯ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸಲಾಗುತ್ತಿದೆ. ಸಹ್ಯಾದ್ರಿಯ ಮುಂದಿನ ಗುರಿ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಸ್ಥಾನಮಾನ ಪಡೆಯುವುದಾಗಿದೆ ಎಂದರು.

‘ಪದವೀಧರರಲ್ಲಿ ಹೆಚ್ಚುತ್ತಿರುವ ಕೌಶಲ್ಯ ಅಂತರವನ್ನು ಕಡಿಮೆ ಮಾಡಲು ಕೈಗಾರಿಕಾ–ಸಂಯೋಜಿತ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ.’
ಡಾ. ಶರಣಪ್ರಕಾಶ್ ಪಾಟೀಲ್, ಸಚಿವ

‘ಸಹ್ಯಾದ್ರಿಯ ನವೀನ ಶಿಕ್ಷಣ ಮಾದರಿಯನ್ನು ರಾಜ್ಯದ ಇತರ ಸಂಸ್ಥೆಗಳೂ ಅಳವಡಿಸಿಕೊಳ್ಳಬೇಕು.’
ಶಶಿ ಕಿರಣ್ ಶೆಟ್ಟಿ, ಆಲ್‌ಕಾರ್ಗೋ ಗ್ರೂಪ್‌ನ ಸಂಸ್ಥಾಪಕ

Leave a Reply

Your email address will not be published. Required fields are marked *