ಮಂಗಳೂರು: ಕರಾವಳಿ ಭಾಗದ ಬಹುಕಾಲದ ಪ್ರಮುಖ ರೈಲ್ವೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಯುವ ಘಟಕದ ನಿಯೋಗವು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿತು.
ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದ ನಿಯೋಗವು ಶನಿವಾರ ಮಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಪ್ರತ್ಯೇಕ “ಮಂಗಳೂರು ರೈಲ್ವೆ ವಿಭಾಗ ರಚನೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.
ಪ್ರಸ್ತುತ ಮಂಗಳೂರು ಪಾಲಕ್ಕಾಡ್ ರೈಲ್ವೆ ವಿಭಾಗದ ಅಧೀನದಲ್ಲಿರುವುದರಿಂದ ಆಡಳಿತಾತ್ಮಕ ವಿಳಂಬ ಉಂಟಾಗುತ್ತಿದ್ದು, ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿಗೆ ಸಮರ್ಪಕ ಆದ್ಯತೆ ಸಿಗುತ್ತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪನೆಯಾದರೆ ರೈಲ್ವೆ ಕಾಮಗಾರಿಗಳಿಗೆ ವೇಗ ಸಿಗಲಿದ್ದು, ಪ್ರಯಾಣಿಕರ ಸೌಲಭ್ಯ ಹಾಗೂ ಹೊಸ ಯೋಜನೆಗಳ ಅನುಷ್ಠಾನ ಸುಗಮವಾಗಲಿದೆ ಎಂದು ನಿಯೋಗ ತಿಳಿಸಿದೆ.
ಪಾಂಡೇಶ್ವರ ಕ್ರಾಸಿಂಗ್ ಸಮಸ್ಯೆ ಪ್ರಸ್ತಾಪ: ಮಂಗಳೂರಿನ ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್‌ನಿಂದ ಉಂಟಾಗುತ್ತಿರುವ ಭಾರೀ ಟ್ರಾಫಿಕ್ ದಟ್ಟಣೆ ಸಮಸ್ಯೆಯನ್ನೂ ಸಚಿವರ ಗಮನಕ್ಕೆ ತರಲಾಯಿತು. ಬಂಡರ್ ಯಾರ್ಡ್‌ಗೆ ರೈಲು ಸಂಚಾರಕ್ಕಾಗಿ ದಿನದಲ್ಲಿ ಹಲವು ಬಾರಿ ಗೇಟ್ ಮುಚ್ಚಲಾಗುತ್ತಿದ್ದು, ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ತುರ್ತು ಸೇವಾ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ವಿವರಿಸಲಾಯಿತು. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಲಾಯಿತು.
ಬೆಂಗಳೂರು–ಮಂಗಳೂರು ಸಂಪರ್ಕ ಸುಧಾರಣೆಗೆ ಆಗ್ರಹ: ಬೆಂಗಳೂರು–ಮಂಗಳೂರು ರೈಲ್ವೆ ಸಂಪರ್ಕದ ಸುಧಾರಣೆಯ ಅಗತ್ಯವನ್ನೂ ನಿಯೋಗ ಒತ್ತಿ ಹೇಳಿತು. ಶಿರಾಡಿ ಘಾಟ್ ವಿಭಾಗದಲ್ಲಿನ ತೀವ್ರ ತಿರುವುಗಳು ಹಾಗೂ ಏರುಬೀಳುಗಳಿಂದ ರೈಲುಗಳ ವೇಗ ಕುಂಠಿತವಾಗುತ್ತಿದ್ದು, ಪ್ರಯಾಣ ಸಮಯ ಹೆಚ್ಚುತ್ತಿದೆ ಎಂದು ತಿಳಿಸಲಾಯಿತು.
ಹಾಸನ–ಮಂಗಳೂರು ಮಾರ್ಗದಲ್ಲಿ ಸಂಪೂರ್ಣ ಡಬಲ್ ಟ್ರ್ಯಾಕ್ ಹಾಗೂ ಪೂರ್ಣ ವಿದ್ಯುದೀಕರಣದ ಕೊರತೆಯಿಂದ ಹೆಚ್ಚುವರಿ ರೈಲು ಸೇವೆಗಳಿಗೆ ಅಡಚಣೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ಇನ್ನಷ್ಟು ನೇರ ಹಾಗೂ ವೇಗದ ರೈಲು ಸೇವೆಗಳನ್ನು ಆರಂಭಿಸುವಂತೆ ಸಚಿವರಿಗೆ ಒತ್ತಾಯಿಸಲಾಯಿತು.
ಮಂಗಳೂರು ರಾಜ್ಯದ ಪ್ರಮುಖ ಶೈಕ್ಷಣಿಕ, ವಾಣಿಜ್ಯ, ಕೈಗಾರಿಕಾ ಹಾಗೂ ಬಂದರು ನಗರವಾಗಿರುವುದರಿಂದ ರೈಲ್ವೆ ಅಭಿವೃದ್ಧಿಗೆ ವಿಶೇಷ ಆದ್ಯತೆ ಅಗತ್ಯ ಎಂದು ನಿಯೋಗ ಮನವಿ ಮಾಡಿತು.
ಮನವಿ ಸ್ವೀಕರಿಸಿದ ಸಚಿವ ವಿ. ಸೋಮಣ್ಣ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ಸಂಸದ ಬ್ರಿಜೇಶ್ ಚೌಟ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ. ರಾಜ್ಯ ಮೀನುಗಾರ ಘಟಕದ ಅಧ್ಯಕ್ಷ ರತ್ನಾಕರ್ ಸುವರ್ಣ, ಜಿಲ್ಲಾ ಕಾರ್ಯಾಧ್ಯಕ್ಷರಾದ ವಸಂತ್ ಪೂಜಾರಿ, ಇಕ್ಬಾಲ್ ಅಹಮದ್ ಮುಲ್ಕಿ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು, ಸೇವಾದಳದ ಮಾಜಿ ಅಧ್ಯಕ್ಷ ನಜೀರ್ ಸಾಮಾನಿಗೆ, ಯುವ ಘಟಕ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಯುವ ಮುಖಂಡರಾದ ಸುಷಂತ್ ಹಾಗೂ ಪ್ರಶಾಂತ್ ಭಟ್ ಕಡಬ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad
