ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರ ಸಭೆ, ಹೆಚ್ಚಿದ ನಿರ್ವಹಣಾ ವೆಚ್ಚ, ದರ ಏರಿಕೆಯ ಪಟ್ಟು

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ಇಂಧನ, ಎಲ್‌ಪಿಜಿ, ಸಿಎನ್‌ಜಿ ಹಾಗೂ ವಾಹನ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಆಟೋ ರಿಕ್ಷಾಗಳ ಕನಿಷ್ಠ ಪ್ರಯಾಣ ದರವನ್ನು ಪ್ರಸ್ತುತ ಇರುವ 35ರಿಂದ 50 ಕ್ಕೆ ಹಾಗೂ ಮೊದಲ 1.5 ಕಿಲೋ ಮೀಟರ್ ನಂತರ ಪ್ರತಿ ಕಿಲೋಮೀಟರ್‌ಗೆ ವಿಧಿಸುವ ದರವನ್ನು 15 ರಿಂದ 30 ಕ್ಕೆ ಹೆಚ್ಚಿಸಬೇಕು ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳ ಪ್ರತಿನಿಧಿಗಳು ಜಿಲ್ಲಾಡಳಿತವನ್ನು ಗುರುವಾರ ಒತ್ತಾಯಿಸಿದರು.

<

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಸಭೆಯಲ್ಲಿ ವಿವಿಧ ಬೇಡಿಕೆ ಮಂಡಿಸಿದ ಆಟೋ ಚಾಲಕರ ಸಂಘವು, ಕಾಯುವಿಕೆ ಶುಲ್ಕ, ರಾತ್ರಿ ವೇಳೆ ವಿಧಿಸುವ ದರ ಹಾಗೂ ಲಗೇಜ್ ಶುಲ್ಕವನ್ನೂ ಪರಿಷ್ಕರಿಸುವಂತೆ ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಸಂಯೋಜಿತ ಆಟೊ ಚಾಲಕರ ಸಂಘದ ಅರುಣ್ ಕುಮಾರ್ ಅವರು ಮಾತನಾಡಿ, ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದರ ಪರಿಷ್ಕರಣೆ ಅನಿವಾರ್ಯ ಆಗಿದೆ. ಪ್ರಸ್ತುತ ಇರುವ 15 ನಿಮಿಷ ಉಚಿತ ಕಾಯುವಿಕೆ ಅವಧಿಯನ್ನು 10 ನಿಮಿಷಕ್ಕೆ ಇಳಿಸಬೇಕು ಎಂದರು.

ಕರ್ನಾಟಕ ಡ್ರೈವರ್ಸ್ ಯೂನಿಯನ್‌ನ ಗಣೇಶ್ ಆರ್. ಶಕ್ತಿನಗರ ಅವರು ಮಾತನಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ದರ ನಿಗದಿಪಡಿಸಬೇಕು. ಇದರಿಂದ ಗ್ರಾಮೀಣ ವ್ಯಾಪ್ತಿಯಲ್ಲಿ ನೋಂದಾಯಿತ ಆಟೊಗಳು ಮಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ನಗರದಲ್ಲಿ ಹೆಚ್ಚಿನ ಸಿಎನ್‌ಜಿ ಭರ್ತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದರು.

ಸಾಮಾಜಿಕ ಪ್ರಜಾಸತ್ತಾತ್ಮಕ ಕಾರ್ಮಿಕ ಸಂಘದ ರಹಿಮಾನ್ ಬೊಳಿಯಾರ್, ಇಂಧನ ದರ ಏರಿಕೆಯಿಂದ ಆಟೋ ಚಾಲಕರ ಜೀವನೋಪಾಯ ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್ ಅವಧಿಯಲ್ಲಿ ನೀಡಿದ ರೀತಿಯ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಈಗಲೂ ನೀಡಬೇಕು ಎಂದರು.

ಕರ್ನಾಟಕ ಪ್ರಗತಿಪರ ಆಟೊ ಚಾಲಕರ ಸಂಘದ ಮೋಹನ್, ಐದು ನಿಮಿಷ ಉಚಿತ ಕಾಯುವಿಕೆ ಬಳಿಕ ಪ್ರತಿ ನಿಮಿಷಕ್ಕೆ 2 ಶುಲ್ಕ ವಿಧಿಸಬೇಕು ಎಂದು ಪ್ರಸ್ತಾಪಿಸಿದರು. ದಕ್ಷಿಣ ಕನ್ನಡ ಆಟೊ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ, ಉಚಿತ ಕಾಯುವಿಕೆ ಅವಧಿಯನ್ನು 10 ನಿಮಿಷಕ್ಕೆ ಸೀಮಿತಗೊಳಿಸಿ, ನಂತರ ಪ್ರತಿ ನಿಮಿಷಕ್ಕೆ 5 ಶುಲ್ಕ ವಿಧಿಸುವಂತೆ ಒತ್ತಾಯಿಸಿದರು.

ದರ ಪರಿಷ್ಕರಣೆ ಬಳಿಕ ಮೀಟರ್ ಕ್ಯಾಲಿಬ್ರೇಷನ್ ಅನ್ನು ಕುಲಶೇಖರದಲ್ಲಿ ಅಲ್ಲದೆ ಮಂಗಳೂರು ನಗರದಲ್ಲೇ ನಡೆಸಬೇಕು. ಕೆಲವು ಸಿಎನ್‌ಜಿ ಹಾಗೂ ಎಲ್‌ಪಿಜಿ ಬಂಕ್‌ಗಳಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಾಸ ಇರುವ ಬಗ್ಗೆ ದಕ್ಷಿಣ ಕನ್ನಡ ಆಟೊ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಭರತ್ ಕುಮಾರ್ ದೂರಿದರು.

2022ರಿಂದ ಎಲ್‌ಪಿಜಿ, ಸಿಎನ್‌ಜಿ, ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಗಣನೀಯವಾಗಿ ಏರಿಕೆಯಾಗಿರುವ ಅಂಕಿ-ಅಂಶಗಳನ್ನು ಉಲ್ಲೇಖಿಸಿದರು. ಆಟೊ ದರ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ನಿರ್ದಿಷ್ಟ ದೂರುಗಳು ಬಂದರೆ ದಿಢೀರ್ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ರವಿಶಂಕರ್ ಕೆ. ಹಾಗೂ ಸಾರಿಗೆ ಇಲಾಖೆಯ ಉಪ ಆಯುಕ್ತ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳ್ಕರ್ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *