ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲಿಕಪ್ಪೆಚಿಪ್ಪು ಮೀನುಗಾರಿಕೆಗೆ ತೆರಳಿದಾಗ ಎಂಟು ಮಂದಿ ನೀರಿನ ಸೆಳತಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದ್ದು, ದೇವರು ಮೃತರ ಕುಟುಂಬಕ್ಕೆ ದುಃಖವನ್ನು ಎದುರಿಸುವ ಶಕ್ತಿಯನ್ನು ನೀಡಲಿ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಈ ವಿಷಯ ತಿಳಿಸಿದ್ದು , ಉಳಿದ ಮೂರು ಮಂದಿ ಮೃತದೇಹ ನುರಿತ ತಂತ್ರಜ್ಞರಿಂದ ಹುಡುಕಿಸಿ ಹಾಗೂ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುವುದು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು 8 ಜನರ ಮೃತ ದೇಹವನ್ನು ಶೋಧನೆ ಮಾಡಿದ್ದು ಉಳಿದ ಮೂವರು ನಾಪತ್ತೆ ಆದವರ ಶೋಧನೆ ಮಾಡುತ್ತಿದ್ದು ,ಆದಷ್ಟು ಶೀಘ್ರವೇ ಪತ್ತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಹಾಗೂ ಶಾಸಕ ದೇಶಪಾಂಡೆ ಸಂತಾಪ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ತೆರಳಿದ್ದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆಯ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ದುಃಖ ಉಂಟಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ದೇಶಪಾಂಡೆ ಸಂತಾಪ ಸೂಚಿಸಿದ್ದಾರೆ.
ಇದು ಅತ್ಯಂತ ಹೃದಯವಿದ್ರಾವಕ ಹಾಗೂ ದುರದೃಷ್ಟಕರ ಘಟನೆ. ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬದ ದುಃಖದಲ್ಲಿ ನಾನು ಸಹಭಾಗಿಯಾಗಿದ್ದೇನೆ. ಮೃತರ ಕುಟುಂಬಗಳಿಗೆ ಸರ್ಕಾರ ಮಾನವೀಯ ನೆಲೆಯಲ್ಲಿ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ
ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಘಟನೆ ಅತ್ಯಂತ ದುಃಖಕರ ಸಂಗತಿ ಆಗಿದೆ. ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಶಾಸಕ ಶಿವರಾಂ ಹೆಬ್ಬಾರ ಸಂತಾಪ
ಭಟ್ಕಳ ತಾಲೂಕಿನ ಶಿರಾಲಿ ಯಲ್ಲಿ ಸಂಭವಿಸಿದ ಭೀಕರ ದುರಂತದ ಸುದ್ದಿ ಮನಸ್ಸನ್ನು ಮಿಡಿಯುವಂತೆ ಮಾಡಿದೆ. ಕಪ್ಪೆಚಿಪ್ಪು ಮೀನುಗಾರಿಕೆಗೆ ತೆರಳಿದ್ದ ಒಂದೇ ಕುಟುಂಬದ 8 ಜನರು ನೀರಿನ ರಭಸಕ್ಕೆ ಸಿಲುಕಿ ಜೀವ ಕಳೆದುಕೊಂಡಿರುವುದು ನಿಜಕ್ಕೂ ನಂಬಲಾರದ ದುಃಖದ ಸಂಗತಿ ಎಂದು ಯಲ್ಲಾಪುರ – ಮುಂಡಗೋಡ – ಬನವಾಸಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ ಸಂತಾಪ ತಿಳಿಸಿದ್ದಾರೆ.

