ಮುಂಡಗೋಡು: ಮಕ್ಕಳ ಸಹಾಯವಾಣಿ (1098)ಗೆ ಬಂದ ದೂರಿನ ಆಧಾರದಲ್ಲಿ ಮುಂಡಗೋಡು ತಾಲೂಕಿನಲ್ಲಿ ನಡೆಯಲಿದ್ದ ಅಪ್ರಾಪ್ತೆಯ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಡೆದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಜುಲೈ 9 ರಂದು ಅಪ್ರಾಪ್ತೆಗೆ ಬಾಲ್ಯ ವಿವಾಹ ನಡೆಸಲಾಗುತ್ತಿದೆ ಎಂಬ ಮಾಹಿತಿ ಮಕ್ಕಳ ಸಹಾಯವಾಣಿಗೆ ಬಂದ ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಎನ್. ಅವರು ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿದರು. ತಂಡವು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಕಾನೂನು ಪರಿಣಾಮಗಳ ಕುರಿತು ಅರಿವು ಮೂಡಿಸಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ಜಿ. ಅವರು ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಬಾಲಕಿಯ ಪೋಷಕರಿಂದ ಇಂತಹ ಘಟನೆ ಮರುಕಳಿಸದಂತೆ ಮುಚ್ಚಳಿಕೆ ಪತ್ರ ಪಡೆದುಕೊಳ್ಳಲಾಯಿತು.
ರಕ್ಷಣಾಧಿಕಾರಿ ವಿಶ್ವನಾಥ್ ಅಶೋಕ್ ನಾಯಕ್ ಅವರು ಬಾಲ್ಯ ವಿವಾಹದಿಂದ ಉಂಟಾಗುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸಂಬಂಧಿತ ದುಷ್ಪರಿಣಾಮಗಳ ಬಗ್ಗೆ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟರು. ಮಕ್ಕಳ ಸಹಾಯವಾಣಿ ಸಿಬ್ಬಂದಿ ಆಶಾ ಫರ್ನಾಂಡಿಸ್ ಅವರು ಇಂತಹ ಪ್ರಕರಣಗಳು ಕಂಡುಬಂದರೆ ತಕ್ಷಣ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಕ್ಷಣ ಸ್ಪಂದಿಸಿ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಎನ್. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಯಿತು.
ಕಾರ್ಯಾಚರಣೆಯ ವೇಳೆ ಮಾಜಿ ಶಾಸಕ ವಿ.ಎಸ್. ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಮಹೇಶ್ ಜಿ. ಹಾಗೂ ವಿಶ್ವನಾಥ್ ಅಶೋಕ್ ನಾಯಕ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಆಶಾ ಫರ್ನಾಂಡಿಸ್, ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಗೀತಾ ಮಠಪತಿ, ಅಂಗನವಾಡಿ ಮೇಲ್ವಿಚಾರಕಿ, ಪೊಲೀಸ್ ಇಲಾಖೆಯ ಎಎಸ್‌ಐ ಸೋಮಶೇಖರ್ ಮೇತ್ರಿ, ಸಿಎಚ್‌ಸಿ ಸಿಬ್ಬಂದಿ ಚಂದ್ರಕಾಂತ್ ರಾಥೋಡ್, ಸಿಪಿಸಿ ರಪೈಭಾಷಾ ಮಮ್ಮದಸಾಬನವರ, ಬಾಲಕಿಯ ಪೋಷಕರು, ಗ್ರಾಮಸ್ಥರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇದ್ದರು.

