ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಅಮ್ಮನ ದರ್ಶನಕ್ಕೆ ಬೋಳೂರಿಗೆ ಹರಿದು ಬಂದ ಭಕ್ತಸಾಗರ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ವಿನಯವೇ ಯಶಸ್ಸಿನ ನಿಜವಾದ ಅಡಿಪಾಯ. ವಿನಯವಿರುವೆಡೆ ಮಾತ್ರ ಜೀವನದ ಸಾರ್ಥಕತೆ ಅಡಗಿದೆ ಎಂದು ಸದ್ಗುರು ಮಾತಾ ಅಮೃತಾನಂದಮಯಿ ದೇವಿ ಹೇಳಿದರು.

ಮಂಗಳೂರಿನ ಬೋಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆದ ಮಂಗಳೂರು ಬ್ರಹ್ಮಸ್ಥಾನ ಮಹೋತ್ಸವದ ಎರಡನೇ ದಿನ ಶುಕ್ರವಾರ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಜೀವನದ ಏರುಪೇರುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಜೀವನವು ನದಿಯ ಹರಿವಿನಂತಿದ್ದು, ಪ್ರತಿಯೊಂದು ಅನುಭವಕ್ಕೂ ತನ್ನದೇ ಆದ ಉದ್ದೇಶವಿದೆ. ಶರಣಾಗತಿ ಭಾವನೆಯೊಂದಿಗೆ ಬದುಕಿದಾಗ ಮಾತ್ರ ಆತ್ಮಸಂತೃಪ್ತಿ ದೊರೆಯುತ್ತದೆ ಎಂದರು.

ಮಣ್ಣಿನ ಅಡಿಯಲ್ಲಿ ಹೂತ ಬೀಜವೇ ಮುಂದೆ ಫಲ ನೀಡುವ ಮರವಾಗಿ ಬೆಳೆಯುತ್ತದೆ. ಅದೇ ರೀತಿ ವಿನಯಶೀಲರ ಜೀವನದಲ್ಲಿ ಯಶಸ್ಸು ತಾನಾಗಿಯೇ ಅರಳುತ್ತದೆ ಎಂದರು.

ಬೆಳಿಗ್ಗೆ ಅಮ್ಮ ವೇದಿಕೆಗೆ ಆಗಮಿಸುತ್ತಿದ್ದಂತೆ ಭಕ್ತರು ಜೈ ಘೋಷಗಳೊಂದಿಗೆ ಸ್ವಾಗತಿಸಿದರು. ಚಿನ್ಮಯ ಮಿಷನ್‌ನ ಸ್ವಾಮಿ ಗಹನಾನಂದ, ಇಸ್ಕಾನ್ ಮುಖ್ಯಸ್ಥ ಪ್ರಭು ಗುಣಾಕರ ದಾಸ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಭಜನೆ, ಧ್ಯಾನ ಕಾರ್ಯಕ್ರಮ

ಅಮ್ಮನವರ ನೇತೃತ್ವದಲ್ಲಿ ಭಜನೆ ಹಾಗೂ ಧ್ಯಾನ ಕಾರ್ಯಕ್ರಮ ನಡೆಯಿತು. ಎರಡು ದಿನಗಳ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದು, ಮಠದ ಆವರಣದಲ್ಲಿ ಭಕ್ತಿ ಭಾವದ ವಾತಾವರಣ ನಿರ್ಮಾಣವಾಗಿತ್ತು. ಅಮಲ ಭಾರತಂ ಅಭಿಯಾನದ ಅಂಗವಾಗಿ ಯಜ್ಞ ವೇದಿಕೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯವೂ ನಡೆಯಿತು. ಮೇ 31 ಹಾಗೂ ಜೂನ್ 1ರಂದು ಕೇರಳದ ಕೋಝಿಕೋಡ್‌ನಲ್ಲಿ ನಡೆವ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಮ್ಮ ಪ್ರಯಾಣಿಸಲಿದ್ದಾರೆ.

Leave a Reply

Your email address will not be published. Required fields are marked *