ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಆರೋಗ್ಯ ಇಲಾಖೆ ಕಾರ್ಯದರ್ಶಿ ರಿತ್ವಿಕ್ ರಂಜನಮ್ ಪಾಂಡೆ ಶುಕ್ರವಾರ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳ ಕಾರ್ಯವೈಖರಿ ಹಾಗೂ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳಲಿರುವ ಹೊರರೋಗಿ ವಿಭಾಗದ ಕಟ್ಟಡದ ಸ್ಥಳವನ್ನು ವೀಕ್ಷಿಸಿದ ಅವರು, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಬಳಿಕ ಸಿಸಿಬಿ ಕಟ್ಟಡದ ಕಾಮಗಾರಿಯನ್ನೂ ಪರಿಶೀಲಿಸಿದರು.
ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕ್ಯಾಥ್‌ಲ್ಯಾಬ್ ಕಾರ್ಯವೈಖರಿ ಪರಿಶೀಲನೆ
ಆಸ್ಪತ್ರೆಯ ಕ್ಯಾಥ್‌ಲ್ಯಾಬ್ ವಿಭಾಗಕ್ಕೆ ಭೇಟಿ ನೀಡಿದ ರಿತ್ವಿಕ್ ರಂಜನಮ್ ಪಾಂಡೆ, ಅಲ್ಲಿನ ಚಿಕಿತ್ಸಾ ವ್ಯವಸ್ಥೆ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಇದುವರೆಗೆ 1,200ಕ್ಕೂ ಹೆಚ್ಚು ಆಂಜಿಯೋಗ್ರಾಂ ಹಾಗೂ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಳು ನಡೆದಿರುವ ಬಗ್ಗೆ ಅವರು ಮಾಹಿತಿ ಪಡೆದರು. ಹೃದ್ರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆಯೂ ಅಧಿಕಾರಿಗಳಿಂದ ವಿವರ ಪಡೆದುಕೊಂಡರು.
ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಶರತ್ ಅವರು ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿಯಲ್ಲಿ ಲಭ್ಯವಿರುವ ವ್ಯವಸ್ಥೆಗಳು ಹಾಗೂ ಸೇವೆಗಳ ಕುರಿತು ಕಾರ್ಯದರ್ಶಿಗೆ ಮಾಹಿತಿ ನೀಡಿದರು.
ಭೇಟಿಯ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್., ಆರ್‌ಎಂಒ ಡಾ. ಮಧುಸೂದನ್, ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಶರತ್, ಸಹಾಯಕ ಆಡಳಿತ ಅಧಿಕಾರಿ ಪುಟ್ಟರಾಜು, ನರ್ಸಿಂಗ್ ಅಧೀಕ್ಷಕಿ ಟ್ರೇಸಿಯಮ್ಮ, ವೆನ್ಲಾಕ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
What do you feel about this post?
Like
Love
Happy
Haha
Sad






