ಮಂಗಳೂರು: ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಹಿರಿಯ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಪ್ರತಿಷ್ಠಿತ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ರಜತ ಮಹೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಆರ್‌ಎನ್‌ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ರವಿಶಂಕರ್ ಬಿ.ವಿ. ಅವರು ಬೆಳ್ಳಿ ಹಾಗೂ ಚಿನ್ನದ ಪದಕದೊಂದಿಗೆ ‘ಬಸವಶ್ರೀ’ ಪ್ರಶಸ್ತಿಯನ್ನು ಅಂಚನ್ ಅವರಿಗೆ ಪ್ರದಾನ ಮಾಡಿದರು.
ಕ್ರೀಡಾ ಕ್ಷೇತ್ರದ ಬೆಳವಣಿಗೆ, ಕ್ರೀಡಾಪಟುಗಳ ಸಾಧನೆ ಹಾಗೂ ಕ್ರೀಡೆಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಅಂಕಣ ಬರಹಗಳ ಮೂಲಕ ನಿರಂತರವಾಗಿ ದಾಖಲಿಸುತ್ತಿರುವ ಅಂಚನ್ ಅವರ ಸೇವೆಯನ್ನು ಸಮಾರಂಭದಲ್ಲಿ ಶ್ಲಾಘಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಂಗಳೂರು ಆರ್‌ಎನ್‌ಎಸ್ ಕಾಲೇಜು ಹಾಗೂ ಮುಡಿಪುವಿನ ಜ್ಞಾನಶ್ರೀ ವಿದ್ಯಾಲಯದ ವತಿಯಿಂದಲೂ ಅಂಚನ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಬಸವ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀ ವಚನ ಜ್ಯೋತಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ದಾನಪ್ರಕಾಶ ಎನ್. ತಿಮ್ಮಪ್ಪ, ಬೆಂಗಳೂರು ಎಂ.ಎನ್.ಆರ್. ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹನ್ ಕುಮಾರ್ ಆರ್., ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ, ಜ್ಞಾನ ಮಂದಾರ ಟ್ರಸ್ಟ್‌ನ ಸಂಸ್ಥಾಪಕ ಸೋಮಶೇಖರ, ಅಂತರ ರಾಷ್ಟ್ರೀಯ ನೃತ್ಯ ಕಲಾವಿದೆ ಹಾಗೂ ಚಲನಚಿತ್ರ ನಟಿ ಎಂ.ಎಸ್. ಆರತಿ ಸುರೇಶ್, ಪ್ರೊ. ಕಾಂತಪ್ಪ, ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಹಾಗೂ ರಂಗ ಸಮಾಜ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ತಿಲಕ್ ರಾಜ್ ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕ್ರೀಡಾ ಬರವಣಿಗೆ ಕ್ಷೇತ್ರದಲ್ಲಿನ ಸೇವೆಗಾಗಿ ಅಂಚನ್ ಅವರು ಈ ಹಿಂದೆ ಹಲವು ಪ್ರಶಸ್ತಿ–ಪುರಸ್ಕಾರಗಳನ್ನು ಪಡೆದಿದ್ದಾರೆ. 2013ರಲ್ಲಿ ‘ಮೀಡಿಯಾ ಅವಾರ್ಡ್’, 2014ರಲ್ಲಿ ‘ಸಮಾಜ ರತ್ನ’ ರಾಜ್ಯ ಪ್ರಶಸ್ತಿ, 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, 2019ರಲ್ಲಿ ಜಾನಪದ ಲೋಕ ರಾಜ್ಯ ಪ್ರಶಸ್ತಿ ಹಾಗೂ ‘ನಮ್ಮ ಕುಡ್ಲ ಸಾಧಕ’ ಪ್ರಶಸ್ತಿ ಪಡೆದಿದ್ದಾರೆ.
2020ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಕೆ.ಎ. ನೆಟ್ಟಕಲ್ಲಪ್ಪ ರಾಜ್ಯ ಪ್ರಶಸ್ತಿ, 2021ರಲ್ಲಿ ಸಿದ್ಧಗಂಗಾಶ್ರೀ ರಾಜ್ಯ ಪ್ರಶಸ್ತಿ, 2022ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದ ಕೆ.ಆರ್. ಟ್ಯಾಗೋರ್ ದತ್ತಿ ನಿಧಿ ಪ್ರಶಸ್ತಿ, 2023ರಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ ಹಾಗೂ ಸಾಧನ ಪ್ರಶಸ್ತಿ, 2024ರಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ, 2026ರಲ್ಲಿ ಜಾನಪದ ರತ್ನ ಪ್ರಶಸ್ತಿ ಮತ್ತು ಕನ್ನಡ ಪಯಸ್ವಿನಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ.
What do you feel about this post?
Like
Love
Happy
Haha
Sad





