ಮಂಗಳೂರು: ರಾಜ್ಯ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮಂಗಳೂರಿನ ಕೆಲವು ಪ್ರದೇಶಗಳಲ್ಲಿ ಡ್ರೋನ್ ಹಾರಾಟ ಹಾಗೂ ಕಾರ್ಯಾಚರಣೆಯನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 17ರ ಸಂಜೆ 4 ಗಂಟೆಯಿಂದ ಸೆಪ್ಟೆಂಬರ್ 19ರ ಬೆಳಿಗ್ಗೆ 10 ಗಂಟೆಯವರೆಗೆ ಮೇರಿಹಿಲ್ ಹೆಲಿಪ್ಯಾಡ್, ಮುಖ್ಯಮಂತ್ರಿ ವಾಸ್ತವ್ಯ ಹೂಡುವ ಹೋಟೆಲ್ ತಾಜ್ ವಿವಾಂತ ಹಾಗೂ ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾಸೌಧ’ದ ಸುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ತಾತ್ಕಾಲಿಕ ಕೆಂಪು ವಲಯ ಎಂದು ಘೋಷಿಸಲಾಗಿದೆ.
ಈ ಪ್ರದೇಶಗಳಲ್ಲಿ ಯಾವುದೇ ಮಾದರಿಯ ಡ್ರೋನ್‌ಗಳ ಹಾರಾಟ, ಬಳಕೆ ಮತ್ತು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಮಂಗಳೂರಿಗೆ ಆಗಮಿಸಲಿರುವುದರಿಂದ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ತಾತ್ಕಾಲಿಕ ಕೆಂಪು ವಲಯದ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಡೆಸದಂತೆ ಸಾರ್ವಜನಿಕರು ಹಾಗೂ ಸಂಬಂಧಪಟ್ಟವರು ಆದೇಶ ಪಾಲಿಸುವಂತೆ ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
What do you feel about this post?
Like
Love
Happy
Haha
Sad





