ಮಂಗಳೂರು: ಕರಾವಳಿಗರಿಗೆ ತುಳು ಭಾಷೆ ಕೇವಲ ಭಾವನಾತ್ಮಕ ವಿಷಯವಲ್ಲ; ಅದು ಅಸ್ಮಿತೆಯ ಪ್ರತೀಕ. ತುಳು ಭಾಷೆಗೆ ಸೂಕ್ತ ಮಾನ್ಯತೆ ದೊರೆಯಬೇಕು ಎಂಬುದು ಕರಾವಳಿಗರ ಆಶಯವಾಗಿದ್ದು, ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬೇಡಿಕೆ ಈಡೇರುವ ನಿರೀಕ್ಷೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಹರೀಶ್ ಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 100 ದಿನಗಳನ್ನು ಪೂರೈಸಿದ್ದು, ಜನರ ನಾಡಿಮಿಡಿತ ಅರಿತು ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಪ್ರವಾಸೋದ್ಯಮ, ಐಟಿ ಪಾರ್ಕ್, ಮೀನುಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳು ಕೈಗೊಳ್ಳುವ ನಿರೀಕ್ಷೆಯಿದೆ ಎಂದರು.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ–ಚೆನ್ನಯರ ಹೆಸರಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ಮಂಗಳೂರಿನಲ್ಲಿ ರಾತ್ರಿ ಆರ್ಥಿಕ ಚಟುವಟಿಕೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಆಸಕ್ತಿ ತೋರಿದ್ದು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಕೇಂದ್ರದ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಜಾರಕಿಹೊಳಿ ಅವರಂತಹವರನ್ನು ಕಾಡುತ್ತಿದೆ ಎಂದು ಹರೀಶ್ ಕುಮಾರ್ ಆರೋಪಿಸಿದರು. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಇದೇ ರೀತಿಯ ಕ್ರಮಗಳು ನಡೆದಿದ್ದವು. ಬಳಿಕ ಪ್ರಕರಣಗಳು ಬಿದ್ದು ಹೋದರೂ, ಆ ಸಂದರ್ಭದಲ್ಲಿ ಅವರು ಅನುಭವಿಸಿದ ನೋವು ಹಾಗೂ ಹತಾಶೆಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಅಧಿಕಾರಕ್ಕಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವ ಇಂತಹ ಕ್ರಮಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ. ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಲಾಗುತ್ತದೆ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಅದೇ ವೇಳೆ ಬಿಜೆಪಿಯ ಶಾಸಕರು ಹಾಗೂ ಸಂಸದರು ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎನ್‌ಎಂಪಿಟಿ, ಪಾಸ್‌ಪೋರ್ಟ್ ಕಚೇರಿ ಹಾಗೂ ರಸ್ತೆ ಅಭಿವೃದ್ಧಿಯಂತಹ ಹಲವು ಯೋಜನೆಗಳು ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನಡೆದಿವೆ. ಬಿಜೆಪಿಯವರು ಜಿಲ್ಲೆಗೆ ನೀಡಿರುವ ಕೊಡುಗೆಗಳ ಕುರಿತು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ್, ಅಪ್ಪಿ, ಶುಭೋದಯ ಆಳ್ವ, ಸುಹಾನ್ ಆಳ್ವ, ನವಾಝ್, ಮುಹಮ್ಮದ್ ಮೋನು, ಮನುರಾಜ್, ಯೋಗೀಶ್, ಸಾರಿಕಾ ಪೂಜಾರಿ, ನೀತು ಡಿಸೋಜಾ, ಪದ್ಮನಾಭ ಹಾಗೂ ಯಶವಂತ್ ಇದ್ದರು.
ಪದ್ಮರಾಜ್ ಪೂಜಾರಿ ಪದಗ್ರಹಣ ಸಮಾರಂಭ ಸೆ.20ರೊಳಗೆ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪದ್ಮರಾಜ್ ಆರ್. ಪೂಜಾರಿ ಅವರ ಪದಗ್ರಹಣ ಸಮಾರಂಭ ಸೆ.20ರೊಳಗೆ ನಡೆಯಲಿದೆ. ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಅವರಿಗೆ ಸಂಪೂರ್ಣ ಸಹಕಾರ ನೀಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದು, ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡುವುದರ ಜತೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸಲು ನೂತನ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ನೀಡಲಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದರು.
What do you feel about this post?
Like
Love
Happy
Haha
Sad





