ಮಂಗಳೂರು: ಕರಾವಳಿಯ ಮಂಗಳೂರು ವಿವಿಧ ಧರ್ಮ, ಭಾಷೆ, ಸಂಸ್ಕೃತಿ ಮತ್ತು ವೈವಿಧ್ಯಮಯ ಜೀವನ ಪದ್ಧತಿಯ ಜನರು ಪರಸ್ಪರ ಪ್ರೀತಿ, ಗೌರವ ಹಾಗೂ ಸಹಬಾಳ್ವೆಯಿಂದ ಬದುಕುತ್ತಿರುವ ‘ಮಿನಿ ಭಾರತ’ದಂತಿದೆ. ನಂಬಿಕೆ, ಭಾಷೆ ಹಾಗೂ ರಾಜಕೀಯ ಅಭಿಪ್ರಾಯಗಳು ಭಿನ್ನವಾಗಿರಬಹುದು. ಆದರೆ ರಾಷ್ಟ್ರಧ್ವಜದಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದೇ. ಭಾರತೀಯತೆ ನಮ್ಮ ಹೆಮ್ಮೆಯ ಗುರುತು ಮತ್ತು ಅದುವೇ ನಮ್ಮ ಪ್ರಬಲ ಶಕ್ತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಹೇಳಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಪಥಸಂಚಲನ ಸ್ವೀಕರಿಸಿ ಅವರು ಮಾತನಾಡಿದರು.

ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡುವ, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮಹತ್ವದ ಹೆಜ್ಜೆಯಾಗಿ ಮಲ್ನಾಡ್ ಟೂರಿಸಂ ಕಾರ್ಪೊರೇಷನ್ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಕರಾವಳಿಯತ್ತ ಸೆಳೆಯುವುದು, ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಈ ಮೂಲಕ ಕರಾವಳಿ ಪ್ರದೇಶದ ಯುವಕರ ಭವಿಷ್ಯಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ರೈತರಿಗೆ ಶೇ 50 ರಷ್ಟು ಸಹಾಯಧನ
ರೈತರು, ಯುವಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರಿಗೆ ಅನುಕೂಲವಾಗುವಂತೆ ಸರ್ಕಾರ 100 ದಿನಗಳ ಅವಧಿಯಲ್ಲಿ 10 ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೈತ ಮಿತ್ರ ಯೋಜನೆಯಡಿ ಒಂದು ಹೆಕ್ಟೇರ್‌ವರೆಗೆ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ 50 ರಷ್ಟು ಸಹಾಯಧನ ನೀಡಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಗ್ರಾಮೀಣ ಬದುಕಿನ ನೈಜ ಅನುಭವ ಕಲ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಯುವಕರಿಗೆ ಸಂಘಟನೆ, ಉದ್ಯೋಗಕ್ಕೆ ಒತ್ತು
ಯುವ ಕರ್ನಾಟಕ ನಿರ್ಮಾಣ ಯೋಜನೆಯಡಿ ಭಾರತ್ ಜೋಡೋ ಯುವಕ ಸಂಘ ಮಿಷನ್ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ 4 ಸಾವಿರ ಯುವಕ ಸಂಘಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ವಾರ್ಷಿಕ ತಲಾ 10 ಲಕ್ಷ ರೂ. ಅನುದಾನದಂತೆ ಒಟ್ಟು ವಾರ್ಷಿಕ 1,000 ಕೋಟಿ ರೂ. ವೆಚ್ಚದಲ್ಲಿ ಯುವಕರ ಆರೋಗ್ಯ, ಕೌಶಲ್ಯಾಭಿವೃದ್ಧಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಉತ್ತೇಜನ ನೀಡಲಾಗುವುದು. ಯುವ ಉದ್ಯೋಗ ಸೇತು, ಸರ್ಕಾರಿ ಆಸ್ಪತ್ರೆಗಳ ದತ್ತು ಯೋಜನೆ, ನಶೆ ಮುಕ್ತ ಕರ್ನಾಟಕ, ಪ್ರಜಾಸೇವೆ ಇಲಾಖೆ, ಭೂ ಗ್ಯಾರಂಟಿ ಹಾಗೂ ಕರ್ನಾಟಕ ಮೊಬಿಲಿಟಿ ಗ್ರಿಡ್ ಮಿಷನ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಪೊಲೀಸ್ ಬ್ಯಾಂಡ್‌ನೊಂದಿಗೆ ರಾಷ್ಟ್ರಗೀತೆ, ಕೆನರಾ ಶಾಲೆಯ ಮಕ್ಕಳಿಂದ ವಂದೇ ಮಾತರಂ, ನಾಡಗೀತೆ ಹಾಗೂ ರೈತ ಗೀತೆ ಗಾಯನ ನಡೆಯಿತು. ಎಸಿಪಿ ವಿಜಯ ಕ್ರಾಂತಿ ಅವರ ನೇತೃತ್ವದಲ್ಲಿ ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಸೇವಾದಳದ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಎಸ್‌ಡಿಎಂ ಅಶೋಕನಗರದ ಸ್ಕೌಟ್ಸ್ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ರೋಲಿಂಗ್ ಸೀಲ್ಡ್ ಸ್ವೀಕರಿಸಿತು.
ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದ ಐರಿನ್ ಡಿಸೋಜ
ಕಳೆದ ಫೆಬ್ರವರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 63 ವರ್ಷದ ಐರಿನ್ ಡಿಸೋಜಾ ಅವರ ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಸೇವೆಯನ್ನು ಸ್ಮರಿಸಲಾಯಿತು. ಅಂಗಾಂಗ ದಾನಕ್ಕೆ ಪ್ರೇರಣೆ ನೀಡಿದ ಅವರ ಪುತ್ರಿ ನೀತಾ ಪಿರೇರಾ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು. ಎಚ್., ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಜಿಪಂ ಸಿಇಒ ನಾರ್ವಡೆ ವಿನಾಯಕ್ ಕರ್ಭಾರಿ ಹಾಗೂ ಪಾಲಿಕೆ ಕಮಿಷನರ್ ರಾಹುಲ್ ರತ್ನಂ ಪಾಂಡೆ ಇದ್ದರು.
What do you feel about this post?
Like
Love
Happy
Haha
Sad





