ಕಾರವಾರ: ಭಟ್ಕಳ ನಗರದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಅಮ್ಮನವರ ಹೊರೆಯನ್ನಿಡುವ ಮುರುವಿನಕಟ್ಟೆ ಕುರಿತು ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಹಾಗೂ ಸುಳ್ಳು ಮಾಹಿತಿ ಪೋಸ್ಟ್ ಮಾಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಮೂಲ ಮುರುವಿನಕಟ್ಟೆಗೆ ಧಕ್ಕೆ ಆಗಿರುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡುವುದು ಕಂಡು ಬಂದಿದ್ದು, ಸಾರ್ವಜನಿಕರು ಇಂತಹ ಸುದ್ದಿಗಳನ್ನು ಯಾವುದೇ ಕಾರಣಕ್ಕೂ ಸುಳ್ಳು ವದಂತಿ ನಂಬಬಾರದು. ಎನ್ ಎಚ್ ಎಐ ಅವರಿಂದ ಲಭ್ಯ ಸರ್ಕಾರಿ ಜಮೀನಿನಲ್ಲಿ ಮೇ 24 ರಂದು ಕೆಂಪು ಕಲ್ಲಿನಿಂದ ಕಟ್ಟಲಾಗುತ್ತಿರುವ ಸಂರಚನೆಯನ್ನು ಯಾರೋ ಕಿಡಿಗೇಡಿಗಳು ನಾಶಪಡಿಸಿದ್ದು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆಯನ್ನಿಡಲಾಗುತ್ತಿರುವ ಮೂಲ ಕಟ್ಟೆ ಇರುವ ಮುರುವಿನಕಟ್ಟೆ ಸ್ಥಳವು ಯಥಾಸ್ಥಿತಿಯಲ್ಲಿದೆ. ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆಯನ್ನಿಡುವ ಮೂಲ ಸ್ಥಳ ಮುರುವಿನಕಟ್ಟೆ ಯಥಾಸ್ಥಿತಿಯಲ್ಲಿ ಇರುತ್ತದೆ ಎಂಬುದಾಗಿ ಮತ್ತೊಮ್ಮೆ ಸ್ಪಷ್ಟಿಕರಣ ನೀಡಲಾಗಿದೆ. ಮುಂದುವರೆದು ಯಾರಾದರೂ ಇಂತಹ ಸುಳ್ಳು ಹಾಗೂ ತಪ್ಪು ಮಾಹಿತಿ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ.

