ಮಂಗಳೂರು: ಕ್ರೀಡಾಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಪಟುಗಳು ಧಾರವಾಡದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪದಕಗಳ ಸುಗ್ಗಿಯನ್ನೇ ಹರಿಸಿದ್ದಾರೆ. ಜಿಲ್ಲೆಯ 60 ಮಂದಿ ಕ್ರೀಡಾಪಟುಗಳು 120ಕ್ಕೂ ಅಧಿಕ ಪದಕಗಳನ್ನು ಗೆಲ್ಲುವ ಮೂಲಕ ದಕ್ಷಿಣ ಕನ್ನಡದ ಮಾಸ್ಟರ್ ಅಥ್ಲೆಟಿಕ್ಸ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ.
ಈಚೆಗೆ ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯ, ಪರಿಶ್ರಮ ಹಾಗೂ ನಿರಂತರ ಅಭ್ಯಾಸದ ಬಲವನ್ನು ಪ್ರದರ್ಶಿಸಿದ್ದಾರೆ. ವಿವಿಧ ವಯೋಮಾನದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಾಸ್ಟರ್ ಅಥ್ಲೆಟಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 120ಕ್ಕೂ ಅಧಿಕ ಪದಕಗಳನ್ನು ಗೆದ್ದಿರುವುದು ಈ ಬಾರಿಯ ಸಾಧನೆಯ ವಿಶೇಷತೆಯಾಗಿದೆ. 60 ಮಂದಿ ಕ್ರೀಡಾಪಟುಗಳ ಸಂಘಟಿತ ಪ್ರಯತ್ನ ಹಾಗೂ ಕ್ರೀಡೆಯ ಮೇಲಿನ ಬದ್ಧತೆ ಈ ಯಶಸ್ಸಿಗೆ ಸಾಕ್ಷಿಯಾಗಿದೆ.
ತಂಡದ ಈ ಐತಿಹಾಸಿಕ ಸಾಧನೆಯ ಹಿನ್ನೆಲೆಯಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪದಕ ವಿಜೇತ ಕ್ರೀಡಾಪಟುಗಳು ತಾವು ಗಳಿಸಿದ ಪದಕಗಳನ್ನು ಧರಿಸಿ ಸಂಭ್ರಮಿಸಿದರು. ಸಾಧನೆಯ ಸಂಕೇತವಾಗಿ ಟ್ರೋಫಿಯನ್ನು ಪ್ರದರ್ಶಿಸಿ ಸಾಮೂಹಿಕ ಛಾಯಾಚಿತ್ರ ತೆಗೆಸಿಕೊಂಡರು.
ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ, ಆಸಕ್ತಿ ಮತ್ತು ಪರಿಶ್ರಮವಿದ್ದರೆ ಯಾವುದೇ ವಯಸ್ಸಿನಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಪಟುಗಳ ಈ ಯಶಸ್ಸು ಉತ್ತಮ ನಿದರ್ಶನವಾಗಿದೆ. ದೈಹಿಕ ಕ್ಷಮತೆ, ಮಾನಸಿಕ ಉಲ್ಲಾಸ, ಶಿಸ್ತು ಮತ್ತು ನಿರಂತರ ಅಭ್ಯಾಸದ ಮೂಲಕ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಹಿರಿಯ ಕ್ರೀಡಾಪಟುಗಳ ಸಾಧನೆ ಇತರರಿಗೂ ಪ್ರೇರಣೆಯಾಗಿದೆ.
ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಈ ತಂಡದ ಸಾಧನೆ ಕ್ರೀಡಾಭಿಮಾನಿಗಳಲ್ಲಿ ಸಂತಸ ಮತ್ತು ಹೆಮ್ಮೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಪಟುಗಳು ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತರಲಿ ಎಂಬ ಆಶಯ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಲಕ್ಷ್ಮಣ ರೈ, ಸಂಘದ ನೂತನ ಅಧ್ಯಕ್ಷ ಗಿರಿಧರ್ ಸಾಲಿಯಾನ್, ಉಪಾಧ್ಯಕ್ಷೆ ಭಾಗೀರಥಿ ರೈ, ಗೌರವಾಧ್ಯಕ್ಷ ತೇಜೋಮಯ, ಮಹಾಬಲ ರೈಸಹ ಕಾರ್ಯದರ್ಶಿ ಮೇರಿಹಿಲ್ಡಾ ಇದ್ದರು. ಗಣೇಶ್ ಎಸ್ ವಂದಿಸಿದರು.


