ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 15,539 ಅಭ್ಯರ್ಥಿಗಳು, ಸ್ಥಳದಲ್ಲಿಯೇ 2416 ಮಂದಿಗೆ ಆಫರ್: ವಿವೇಕ್ ಆಳ್ವ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು; ಉದ್ಯೋಗ ಅರಸಿ ಬಂದ ಸಾವಿರಾರು ಅಭ್ಯರ್ಥಿಗಳ ಪೈಕಿ 2,416 ಮಂದಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ ದೊರೆತಿದ್ದು, ಮತ್ತೊಂದು 6,183 ಮಂದಿ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗೆ ಆಯ್ಕೆಯಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ ಈ ಬಾರಿ ಗಮನಾರ್ಹ ಫಲಿತಾಂಶ ದಾಖಲಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

<

332 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು, 15,539 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗಾಗಿ ಭಾಗವಹಿಸಿದ್ದರು. ಮೇಳದಲ್ಲಿ ಭಾಗವಹಿಸಿದ್ದ 301 ಕಂಪನಿಗಳ ಫಲಿತಾಂಶಗಳನ್ನು ಈಗಾಗಲೇ www.alvaspragati.com , http://www.alvaspragati.com ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಉಳಿದ ಕಂಪನಿಗಳು ಹಾಗೂ ಅಭ್ಯರ್ಥಿಗಳ ಫಲಿತಾಂಶಗಳನ್ನು ನೇಮಕಾತಿ ಸಂಸ್ಥೆಗಳಿಂದ ಮಾಹಿತಿ ಲಭ್ಯವಾದಂತೆ ಪ್ರಕಟಿಸಲಾಗುವುದು ಎಂದರು.

ಉದ್ಯೋಗ ಮೇಳದ ದಿನ ಸ್ಥಳದಲ್ಲೇ ನೋಂದಣಿ ಮಾಡಿಕೊಂಡ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ಆಳ್ವಾಸ್ ತಂಡ ದೂರವಾಣಿ ಕರೆ ಹಾಗೂ ಎಸ್‌ಎಂಎಸ್ ಮೂಲಕ ನೇರವಾಗಿ ತಿಳಿಸಲಿದೆ ಎಂದು ತಿಳಿಸಿದರು.

ಈ ಬಾರಿ ಉತ್ಪಾದನಾ ವಲಯದಲ್ಲಿ 75 ಕಂಪನಿಗಳು ಭಾಗವಹಿಸಿದ್ದು, 924 ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿ, 523 ಮಂದಿಗೆ ಉದ್ಯೋಗ ದೊರೆತಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಇವರಲ್ಲಿ ಬಹುತೇಕರು ಮಹಿಳೆಯರಾಗಿದ್ದಾರೆ. ಎಚ್‌ಎಲ್ ಮಾಂಡೊ ಸಂಸ್ಥೆ ಇಇಇ, ಇಸಿಇ ಹಾಗೂ ಮೆಕ್ಯಾನಿಕಲ್ ವಿಭಾಗಗಳ 99 ಎಂಜಿನಿಯರಿಂಗ್ ಪದವೀಧರರನ್ನು ಚೆನ್ನೈಯಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟರ್ ಸಂಸ್ಥೆ ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಅಭ್ಯರ್ಥಿಯನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿಕೊಂಡಿದೆ. ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ 30 ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ ಎಂದರು.

ಮಾಹಿತಿ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಕ್ಷೇತ್ರದಲ್ಲಿ 34 ಕಂಪನಿಗಳು ಭಾಗವಹಿಸಿದ್ದು, 1,301 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. 96 ಮಂದಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ ದೊರೆತಿದೆ. ವುಡ್‌ರಾಕ್ ಇನ್ಫೋಟೆಕ್ 17 ಮಂದಿಯನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿಕೊಂಡಿದ್ದು, ಪ್ರೋಟಾಕ್ ಸೊಲ್ಯೂಷನ್ಸ್ ಚೆನ್ನೈಯ ಉದ್ಯೋಗಕ್ಕಾಗಿ 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇಲೋಜಿಕ್ಸಾ ಸಂಸ್ಥೆ ಆಫ್ರಿಕಾದ ಕಾಂಗೋದಲ್ಲಿ ಒಬ್ಬ ಅಭ್ಯರ್ಥಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದರು.

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರದಲ್ಲಿ 913 ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದ್ದು, 211 ಮಂದಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ. ಬಹುರಾಷ್ಟ್ರೀಯ ಕಂಪನಿ ಇಎಕ್ಸ್‌ಎಲ್ ಸರ್ವಿಸಸ್ ಮಾನವ ಸಂಪನ್ಮೂಲ, ಅಕೌಂಟ್ಸ್ ರಿಸೀವಬಲ್ ಮತ್ತು ಅಕೌಂಟ್ಸ್ ಪೇಯಬಲ್ ವಿಭಾಗಗಳಿಗೆ 38 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ. ಔಷಧೀಯ ಕ್ಷೇತ್ರದಲ್ಲಿ ಯೂರೋಫಿನ್ಸ್, ಆರ್.ಎಲ್. ಫೈನ್ ಕೆಮ್, ಸೋಲಾರಾ ಆಕ್ಟಿವ್ ಫಾರ್ಮಾ ಸೈನ್ಸಸ್, ಮೆಡಾರ್ಗ್ಯಾನಿಕ್ಸ್ ಇಂಡಿಯಾ, ಸಾಮಿ ನ್ಯೂಟ್ರಾಸ್ಯುಟಿಕಲ್ಸ್, ವಸುಧಾ ಲೈಫ್ ಸೈನ್ಸ್, ಬಯೋಕಾನ್ ಹಾಗೂ ಗ್ರೂಪ್ ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ ವಿವಿಧ ಸಂಸ್ಥೆಗಳು 159 ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿಕೊಂಡಿದ್ದು, 40 ಮಂದಿಗೆ ಉದ್ಯೋಗ ದೊರೆತಿದೆ ಎಂದರು.

ಅಭ್ಯರ್ಥಿಗಳಿಗೆ ಗರಿಷ್ಠ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿವಿಧ ವಲಯಗಳ ಸಂಯೋಜಕರು ನೇಮಕಾತಿ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೇಮಕಾತಿಯ ಮುಂದಿನ ಹಂತಗಳ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದರು.

ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಅಭ್ಯರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಉದ್ಯೋಗ ಅಗತ್ಯಗಳನ್ನು ಅರಿತು ಸೂಕ್ತ ಅವಕಾಶಗಳನ್ನು ಒದಗಿಸಲು ತಾಲೂಕು ಮಟ್ಟದ ಘಟಕಗಳನ್ನು ಸ್ಥಾಪಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ ಎಂದರು.

ಉದ್ಯೋಗಾವಕಾಶಗಳ ಕುರಿತು ಅಭ್ಯರ್ಥಿಗಳಲ್ಲಿ ಮಾಹಿತಿ ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ಈಗಾಗಲೇ ‘ಆಳ್ವಾಸ್ ಪ್ರಗತಿ’ ವತಿಯಿಂದ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಮೇಳಕ್ಕೆ ನಾಲ್ಕೈದು ತಿಂಗಳು ಮುಂಚಿತವಾಗಿ ವಿವಿಧ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ನುಡಿಸಿರಿ ಸಂಯೋಜಕರ ಸಹಕಾರ ಪಡೆದು ಇಂತಹ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಮುಂಬೈನ ಬೆಥನಿ ಆಸ್ಪತ್ರೆ 103 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ. ಸೀನಿಕ್ ಸಮಿಟ್ ರೆಸಾರ್ಟ್ ಪ್ರಕೃತಿ ಚಿಕಿತ್ಸಾ ವಿಭಾಗದ ಪದವೀಧರರನ್ನು ವೆಲ್‌ನೆಸ್ ಥೆರಪಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ.
ಜಿಬಿಎಂಟಿ ಸೆಕ್ಟರಲ್ ಸ್ಟೀಲ್ ಮ್ಯಾನುಫ್ಯಾಕ್ಟರಿಂಗ್ ಇಂಡಸ್ಟ್ರೀಸ್ ಸಂಸ್ಥೆ ಐಟಿಐ, ಡಿಪ್ಲೊಮಾ ಹಾಗೂ ಪದವೀಧರರಾದ 9 ಅಭ್ಯರ್ಥಿಗಳನ್ನು ಯುಎಇಯ ಉದ್ಯೋಗಾವಕಾಶಗಳಿಗೆ ಆಯ್ಕೆ ಮಾಡಿದೆ ಎಂದು ವಿವೇಕ್ ಆಳ್ವ ಅವರು ತಿಳಿಸಿದರು.

ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಸಂಸ್ಥೆ 117 ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿಕೊಂಡಿದ್ದು, ಸೌದಿ ಅರೇಬಿಯಾ ಹಾಗೂ ಗುಜರಾತ್‌ನ ಅದಾನಿ ಮುಂದ್ರಾ ಯೋಜನೆಗಳಿಗೆ 13 ಮಂದಿಯನ್ನು ಸ್ಥಳದಲ್ಲೇ ನೇಮಕ ಮಾಡಿಕೊಂಡಿದೆ. ಗ್ರೋ ಪಿಡಬ್ಲ್ಯುಡಿ ಸಂಸ್ಥೆ ಇಬ್ಬರು ವಿಶೇಷ ಚೇತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡ್‌ಯಂಗ್ ಸಂಸ್ಥೆ ಆರು ಅಭ್ಯರ್ಥಿಗಳನ್ನು ಹಾಗೂ ಲುಲು ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್ಸ್ 45 ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿಕೊಂಡಿದೆ ಎಂದರು.

ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಪ್ರಗತಿ–2026 ಉತ್ಪಾದನಾ ವಲಯದ ಮುಖ್ಯಸ್ಥ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗದ ರಂಜಿತಾ ಆಚಾರ್ಯ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹಾಗೂ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ದಿಶಾ ಶೆಟ್ಟಿ ಇದ್ದರು.

 

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *