ಮಂಗಳೂರು: ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ 16ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ. ಈ ಬಾರಿ 300ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ಸಂಸ್ಥೆಗಳು ನೇರ ನೇಮಕಾತಿ ಪ್ರಕ್ರಿಯೆ ನಡೆಸಲಿದ್ದು, ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದುವರೆಗೆ ಆಯೋಜಿಸಿರುವ ಉದ್ಯೋಗ ಮೇಳಗಳಲ್ಲಿ 250ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ಒಟ್ಟು 66,432 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಅವರಲ್ಲಿ 40,848 ಮಂದಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ. ಈ ಬಾರಿಯ ಉದ್ಯೋಗ ಮೇಳದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಮಾಹಿತಿ ತಂತ್ರಜ್ಞಾನ, ಔಷಧೋದ್ಯಮ, ಉತ್ಪಾದನೆ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ಆರೋಗ್ಯ, ಮಾಧ್ಯಮ, ನಿರ್ಮಾಣ, ಎಲೆಕ್ಟ್ರಾನಿಕ್ಸ್, ಶಿಕ್ಷಣ ಹಾಗೂ ಸ್ವಯಂಸೇವಾ ಸಂಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಂಸ್ಥೆಗಳು ನೇಮಕಾತಿ ನಡೆಸಲಿವೆ ಎಂದರು.
ಆಗಸ್ಟ್ 6ರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ ಅಭ್ಯರ್ಥಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಭ್ಯರ್ಥಿಗಳು ಸುಮಾರು 10 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ನವೀಕರಿಸಿದ ಬಯೋಡೇಟಾ, ಅಂಕಪಟ್ಟಿಗಳ ದೃಢೀಕೃತ ಪ್ರತಿಗಳು ಹಾಗೂ ಆನ್‌ಲೈನ್ ನೋಂದಣಿ ಸಂಖ್ಯೆಯೊಂದಿಗೆ ಆಗಸ್ಟ್ 7ರಂದು ಬೆಳಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 9741440490 ಸಂಪರ್ಕಿಸಬಹುದು. ಕಂಪನಿಗಳ ನೋಂದಣಿಗೆ 9731953123 ಸಂಖ್ಯೆಯನ್ನು ಸಂಪರ್ಕಿಸಬಹುದು. www.alvaspragati.com ವೆಬ್‌ಸೈಟ್‌ನಲ್ಲಿ ನೋಂದಣಿ ಹಾಗೂ ಹೆಚ್ಚಿನ ಮಾಹಿತಿ ಲಭ್ಯವಿದೆ.
ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ನೇಮಕಾತಿ ವಿಭಾಗದ ಮುಖ್ಯಸ್ಥೆ ರಂಜಿತಾ ಆಚಾರ್ಯ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಇದ್ದರು.
ಮುಖ್ಯಾಂಶಗಳು
* 300ಕ್ಕೂ ಅಧಿಕ ಕಂಪನಿಗಳ ಭಾಗವಹಿಸುವ ನಿರೀಕ್ಷೆ
* ನಾಲ್ಕು ರಾಜ್ಯಗಳ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ
* ಬ್ಯಾಂಕಿಂಗ್, ಐಟಿ, ಆರೋಗ್ಯ, ಉತ್ಪಾದನೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೇಮಕಾತಿ
* ಐಟಿಐ, ಡಿಪ್ಲೊಮಾ, ಪದವಿ, ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಅಭ್ಯರ್ಥಿಗಳಿಗೆ ಅವಕಾಶ
* ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಅಭ್ಯರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ
ಬಾಕ್ಸ್ ಕೋಟ್
ಗ್ರಾಮೀಣ ಪ್ರತಿಭೆಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವುದು ಆಳ್ವಾಸ್ ಪ್ರಗತಿ ಉದ್ಯೋಗ ಮೇಳದ ಪ್ರಮುಖ ಉದ್ದೇಶ.
ಡಾ. ಎಂ. ಮೋಹನ್ ಆಳ್ವ, ಆಳ್ವಾಸ್ ಸಂಸ್ಥಾಪಕ
ನೋಂದಣಿ ಕಡ್ಡಾಯ
ಉದ್ಯೋಗಾಕಾಂಕ್ಷಿಗಳು www.alvaspragati.com, http://www.alvaspragati.com ವೆಬ್‌ಸೈಟ್‌ನಲ್ಲಿ ಉಚಿತವಾಗಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು. ಭಾಗವಹಿಸುವ ಕಂಪನಿಗಳ ವಿವರಗಳನ್ನು ನಿರಂತರವಾಗಿ ವೆಬ್‌ಸೈಟ್‌ನಲ್ಲಿ ನವೀಕರಿಸಲಾಗುತ್ತದೆ. ಜೊತೆಗೆ ಅಭ್ಯರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ನೀಡಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ವಿಶೇಷ ಓರಿಯಂಟೇಶನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಡಾ. ಮೋಹನ್ ಆಳ್ವ ತಿಳಿಸಿದರು.
What do you feel about this post?
Like
Love
Happy
Haha
Sad
