ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಆಲಂಕಾರು ಕಜೆ ಎಂಬಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ದಂಪತಿ ಎರಡು ವರ್ಷದ ಹೆಣ್ಣು ಮಗು ಮನೆಯಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆ ಆಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಪತ್ನಿ ಕೊಲೆ ಮಾಡಿದ ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಮೃತರನ್ನು ಬಜಗೋಳಿ ದಿನೇಶ್ ಹಾಗೂ ಪತ್ನಿ ಸಂಗೀತಾ ಎಂದು ಗುರುತಿಸಲಾಗಿದೆ. ಈ ದಂಪತಿ ಎರಡು ವರ್ಷದ ಹೆಣ್ಣು ಮಗುವಿನ ಜತೆಗೆ ವಾಸವಾಗಿದ್ದರು. ಶನಿವಾರ ಮಧ್ಯಾಹ್ನ ಆದರೂ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮನೆಯೊಳಗೆ ತೆರಳಿದಾಗ ಸಂಗೀತಾ ಅವರು ಮೃತ ಸ್ಥಿತಿಯಲ್ಲಿ ಹಾಗೂ ದಿನೇಶ್ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ದಂಪತಿ ಎರಡು ವರ್ಷದ ಹೆಣ್ಣು ಮಗು ಮನೆಯಲ್ಲಿ ಒಂಟಿ ಆಗಿತ್ತು. ಮಗು ಅತ್ತು ಅತ್ತು ನಿದ್ದೆಗೆ ಜಾರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ದಿನೇಶ್ ಮತ್ತು ಸಂಗೀತಾ ಕೆಲ ದಿನಗಳ ಹಿಂದೇ ಆ ಸ್ಥಳವನ್ನು ತೊರೆದು ಹೋಗಿದ್ದರು. ಬಳಿಕ ಜೂನ್ 19 ರ ಸಂಜೆ ಮತ್ತೆ ಆಲಂಕಾರು ಕಜೆಯ ಬಾಡಿಗೆ ಮನೆಗೆ ಬಂದಿದ್ದರು ಎನ್ನಲಾಗಿದೆ. ಆದರೆ, ಮರು ದಿನವೇ ಈ ದುರಂತ ಸಂಭವಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
What do you feel about this post?
Like
Love
Happy
Haha
Sad
