ಮಂಗಳೂರು: ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡುವ ಕೃತಕ ಹಾಗೂ ನಕಲಿ ಆಹಾರ ಪದಾರ್ಥಗಳ ಉತ್ಪಾದನೆ, ಬಳಕೆ ಮತ್ತು ಮಾರಾಟಕ್ಕೆ ಕಾನೂನಿನಲ್ಲಿ ಈಗಾಗಲೇ ನಿಷೇಧವಿದೆ. ಪನ್ನೀರ್ಗೆ ಸಂಬಂಧಿಸಿದಂತೆ ಜಾರಿಗೊಳಿಸಿರುವ ಕ್ರಮ ಕೇವಲ ಪನ್ನೀರ್ಗೆ ಸೀಮಿತವಾಗಿಲ್ಲ. ಆರೋಗ್ಯಕ್ಕೆ ಅಪಾಯ ಉಂಟು ಮಾಡುವ ಎಲ್ಲ ಬಗೆಯ ಕೃತಕ ಆಹಾರ ಪದಾರ್ಥಗಳಿಗೂ ಅನ್ವಯಿಸುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಸಲಿ ಪನ್ನೀರ್ ಅನ್ನು ಸಂಪೂರ್ಣವಾಗಿ ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಕೆಲ ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ಗಳಲ್ಲಿ ಹಾಲಿನ ಬದಲಿಗೆ ಸಸ್ಯ ಜನ್ಯ ಎಣ್ಣೆ, ಪಿಷ್ಟ ಹಾಗೂ ವಿವಿಧ ರಾಸಾಯನಿಕ ಬಳಸಿ ತಯಾರಿಸಿದ ‘ಅನಲಾಗ್ ಪನ್ನೀರ್’ ಅಥವಾ ಹಾಲೇತರ ಪನ್ನೀರ್ ಅನ್ನು ಬಳಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದರು.
‘ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕೃತಕ ಪನ್ನೀರ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ನೆರೆ ರಾಜ್ಯಗಳಿಂದಲೂ ಇಂತಹ ಕೃತಕ ಪನ್ನೀರ್ ರಾಜ್ಯಕ್ಕೆ ಸರಬರಾಜಾಗುವ ಸಾಧ್ಯತೆ ಇರುವುದರಿಂದ ಗಡಿಭಾಗಗಳಲ್ಲಿ ವಿಶೇಷ ನಿಗಾ ವಹಿಸಲಾಗುವುದು. ಪನ್ನೀರ್ ಮಾತ್ರವಲ್ಲ, ಸಾರ್ವಜನಿಕರ ಆರೋಗ್ಯ ಹಾಗೂ ಜೀವಕ್ಕೆ ಅಪಾಯ ತಂದೊಡ್ಡುವ ಯಾವುದೇ ಕೃತಕ ಅಥವಾ ನಕಲಿ ಆಹಾರ ಪದಾರ್ಥಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
ನಿಗದಿತ ಗುಣಮಟ್ಟ ಹೊಂದಿರದ ಹಾಗೂ ಪ್ರಮಾಣೀಕರಿಸದ ಹಾಲೇತರ ಅಥವಾ ‘ಅನಲಾಗ್ ಪನ್ನೀರ್’ ಉತ್ಪಾದನೆ, ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಅದರ ಬಳಕೆ, ಸಗಟು ಮತ್ತು ಚಿಲ್ಲರೆ ಮಾರಾಟ ಹಾಗೂ ಪ್ರದರ್ಶನಕ್ಕೆ ನಿಷೇಧ ಅನ್ವಯಿಸುತ್ತದೆ. ಕೃತಕ ಪನ್ನೀರ್ನ್ನು ಹೋಟೆಲ್, ರೆಸ್ಟೋರೆಂಟ್ಗಳು ಸೇರಿದಂತೆ ಯಾವುದೇ ಆಹಾರ ಸಂಸ್ಥೆಯಲ್ಲಿ ಬಳಸಿ ಗ್ರಾಹಕರಿಗೆ ಆಹಾರ ತಯಾರಿಸಿ ನೀಡುವುದಕ್ಕೂ ಅವಕಾಶ ಇರುವುದಿಲ್ಲ. ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಸಂಗ್ರಹಿಸಿ ಪ್ರದರ್ಶಿಸುವುದೂ ಕಾನೂನು ಕ್ರಮಕ್ಕೆ ಕಾರಣವಾಗಲಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ತಯಾರಿಸಲಾಗುವ ಪ್ರಮಾಣೀಕೃತ ಉತ್ಪನ್ನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಫ್ರೋಜನ್ ಡೆಸರ್ಟ್, ಪ್ರೊಸೆಸ್ಡ್ ಚೀಸ್, ಮಿಶ್ರಿತ ಕೊಬ್ಬಿನ ಸ್ಪ್ರೆಡ್ನಂತಹ ನಿಗದಿತ ಗುಣಮಟ್ಟದ ಉತ್ಪನ್ನಗಳು ಇದರಿಂದ ಹೊರತಾಗಿವೆ ಎಂದು ತಿಳಿಸಿದರು.
ಕೃತಕ ಪನ್ನೀರ್ ಬಳಕೆ ಮತ್ತು ಮಾರಾಟದ ವಿರುದ್ಧದ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಿದೆ. ಪನ್ನೀರ್ ಸೇರಿದಂತೆ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರಿಶೀಲಿಸಲಾಗುವುದು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೃತಕ ಪನ್ನೀರ್ ಹೆಸರಿನಲ್ಲಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡುವುದನ್ನು ತಡೆಯುವುದು ಹಾಗೂ ಆಹಾರದ ಗುಣಮಟ್ಟ ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವ ಖಾದರ್ ಅವರು ತಿಳಿಸಿದರು.
What do you feel about this post?
Like
Love
Happy
Haha
Sad





