ಹಳೆಯಂಗಡಿ: ಬಸ್ ಪ್ರಯಾಣಿಕರ ಸಮಸ್ಯೆಗೆ ಮಿಡಿದ ಮೀಡಿಯಾ ಮನಸುಗಳು

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಹಳೆಯಂಗಡಿ: ಸ್ಥಳೀಯ ಅಡಳಿತ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಧೋಗತಿಗೆ ತಲುಪಿದ್ದ ಇಲ್ಲಿನ ಹೆದ್ದಾರಿ ಸರ್ವಿಸ್ ರಸ್ತೆಯ ಪ್ರಮುಖ ಬಸ್ ತಂಗುದಾಣವನ್ನು ಮಂಗಳೂರಿನ ‘ಮೀಡಿಯಾ ಮನಸುಗಳು’ ಸಂಘಟನೆಯ ಸದಸ್ಯರು ಸ್ವಚ್ಛಗೊಳಿಸುವ ಮೂಲಕ ಪ್ರಯಾಣಿಕರಿಗೆ ಆಸರೆಯಾಗಿದ್ದಾರೆ.

<

ಒಂದು ವರ್ಷದಿಂದ ಹಳೆಯಂಗಡಿಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನಿರ್ಮಿಸಲ್ಪಟ್ಟಿರುವ ಈ ಬಸ್ ತಂಗುದಾಣವು ಇತಿಹಾಸ ಪ್ರಸಿದ್ದ ಕಟೀಲು ದೇಗುಲ ಹಾಗೂ ಕಿನ್ನಿಗೋಳಿ ಕಡೆಗೆ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಮಹಿಳೆಯರು ಸಹಿತ ಸಾವಿರಾರು ಪ್ರಯಾಣಿಕರಿಗೆ ಅತ್ಯಂತ ಪ್ರಮುಖವಾಗಿದೆ. ರಿಕ್ಷಾ ಪಾರ್ಕ್ ಬಳಿ ಇರುವ ಕಟ್ಟಡದ ಶೌಚಾಲಯದ ನೀರು, ಕೊಳಚೆ ನೀರು, ಚರಂಡಿ ಹಾಗೂ ಮಳೆನೀರು ಸರಾಗವಾಗಿ ಹರಿದುಹೋಗದೆ ಅಲ್ಲೇ ನಿಲ್ಲುತ್ತಿತ್ತು. ಇದರೊಂದಿಗೆ ಬೆಳೆದು ನಿಂತಿದ್ದ ಪೊದೆಗಳು, ಕಸದ ರಾಶಿ, ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಕೊಳೆತ ವಸ್ತುಗಳಿಂದಾಗಿ ಪರಿಸರ ತೀವ್ರ ದುರ್ವಾಸನೆ ಬೀರುತ್ತಿತ್ತು. ರಾತ್ರಿ ವೇಳೆಯಲ್ಲಿ ಈ ಸ್ಥಳವು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿತ್ತು.

ಹತ್ತಿರದಲ್ಲೇ ಇದ್ದ ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಮರಗಿಡಗಳು ತಾಗಿದ್ದು ಗಾಳಿ ಮಳೆಗೆ ಶಾಕ್ ಹೊಡೆಯುವ ಭೀತಿಯೂ ಇತ್ತು. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಈ ತಂಗುದಾಣದೊಳಗೆ ಕಾಲಿಡಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ರಾಜ್ಯಮಟ್ಟದ ಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳಲ್ಲಿ ಹಲವು ಬಾರಿ ವರದಿಗಳು ಪ್ರಕಟಗೊಂಡಿದ್ದರೂ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದರು.

ಇಲಾಖೆಗಳ ಈ ಬೇಜವಾಬ್ದಾರಿತನಕ್ಕೆ ಸ್ಪಂದಿಸಿದ ‘ಮೀಡಿಯಾ ಮನಸುಗಳು’ ಸಂಘಟನೆಯು ತಾವೇ ಸ್ವತಃ ಮುಂದೆ ನಿಂತು ಬಸ್ ತಂಗುದಾಣಕ್ಕೆ ಕಾಯಕಲ್ಪ ನೀಡಲು ಮುಂದಾಯಿತು. ಸಂಘಟನೆಯ ಸದಸ್ಯರು ಸ್ಥಳಕ್ಕೆ ಆಗಮಿಸಿ ಶ್ರಮದಾನದ ಮೂಲಕ ಇಡೀ ತಂಗುದಾಣವನ್ನು ಶುಚಿಗೊಳಿಸಿದರು. ಬಸ್ ನಿಲ್ದಾಣದಲ್ಲಿದ್ದ ಹಳೆಯ ಕಸ, ಮಣ್ಣು, ಪಾಚಿ ಹಾಗೂ ಬೆಳೆದು ನಿಂತಿದ್ದ ಪೊದೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಮೆಸ್ಕಾಂ ನೆರವು ಪಡೆದು ಹೈಟೆನ್ಷನ್ ವೈರ್ ಗೆ ತಾಗಿದ್ದ ಮರಗಿಡಗಳನ್ನು ಕಡಿಯಲಾಯಿತು. ಬಳಿಕ ಇಡೀ ಬಸ್ ಸ್ಟ್ಯಾಂಡ್‌ ಅನ್ನು ತೊಳೆದು ಸ್ವಚ್ಛಗೊಳಿಸಲಾಗಿದ್ದು, ಚರಂಡಿ ಹಾಗೂ ಬೋರ್ಡ್ ಅನ್ನು ಕೂಡ ಶುಚಿಗೊಳಿಸಲಾಯಿತು.

ಈ ಸಮಾಜಮುಖಿ ಕಾರ್ಯದಲ್ಲಿ ಮೀಡಿಯಾ ಮನಸುಗಳು ಸಂಘಟನೆಯ ಪ್ರಮುಖರಾದ ಶಶಿ ಬೆಳ್ಳಾಯರು, ಬಾಲಕೃಷ್ಣ ಶೆಟ್ಟಿ ಸೂರಿಂಜೆ, ಶಿವು ಕುಲಾಲ್, ಸಂದೇಶ್ ಶೆಟ್ಟಿ, ಗಣೇಶ್ ಪಂಜ ಮತ್ತು ಗಿರೀಶ್ ಮಣೇಲ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರಿಗೆ ಮೆಸ್ಕಾಂ ಪವರ್ ಮ್ಯಾನ್ ಶ್ರೀಕಾಂತ್ ಹಾಗೂ ಪೂಜಾ ಕೇಟರರ್ಸ್ ಮಾಲೀಕ ಜೈಕೃಷ್ಣ ಕೋಟ್ಯಾನ್ ಅವರು ಕೈಜೋಡಿಸಿ ಸಂಪೂರ್ಣ ಸಹಕಾರ ನೀಡಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದಿದ್ದ ಬಸ್ ತಂಗುದಾಣವನ್ನು ಯುವಕರ ತಂಡವು ಸ್ವಚ್ಛಗೊಳಿಸುವ ಮೂಲಕ ಮತ್ತೆ ಪ್ರಯಾಣಿಕರ ಬಳಕೆಗೆ ಯೋಗ್ಯವನ್ನಾಗಿಸಿ ಸಾರ್ವಜನಿಕರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *