ಬಂಟ್ವಾಳ: ದೇಶದ ಪ್ರಗತಿ ಹಾಗೂ ವಿದ್ಯುತ್ ಸ್ವಾವಲಂಬನೆಗೆ ಅತ್ಯಂತ ಮಹತ್ವದ್ದಾಗಿರುವ ‘ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಲೈನ್’ ಯೋಜನೆಗೆ ಬಂಟ್ವಾಳ ತಾಲೂಕಿನಾದ್ಯಂತ ಸಾರ್ವಜನಿಕರು ಹಾಗೂ ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬಂಟ್ವಾಳದ ರೈತರ ಮತ್ತು ನಾಗರಿಕರು ಯೋಜನೆಗೆ ಬೇಕಾದ ಭೂಮಿ ನೀಡಿದ್ದು, ಅವರ ದೇಶಪ್ರೇಮ ಹಾಗೂ ಉದಾರ ಮನೋಭಾವ ತಿಳಿಸುತ್ತದೆ ಎಂದು ಯುಕೆಟಿಎಲ್ ಸಂಸ್ಥೆ ತಿಳಿಸಿದೆ.
ಸ್ವಂತ ಭೂಮಿ ಬಿಟ್ಟುಕೊಟ್ಟು ಸಹಕರಿಸಿದ ತಾಲೂಕಿನ ವಿವಿಧ ಗ್ರಾಮಗಳ ಭೂಮಾಲೀಕರು ಹಾಗೂ ರೈತರನ್ನು ಯುಕೆಟಿಎಲ್ ಕಂಪೆನಿ ವ್ಯವಸ್ಥಾಪಕ ಆಗ್ನೆಸ್ ಗೋನ್ಸಾಲ್ವಿಸ್ ಅವರು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ, ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ಹಸ್ತಾಂತರಿಸಿ ಅಭಿನಂದಿಸಿದ್ದಾರೆ.

ಬಂಟ್ವಾಳ ಕಸಬ ಮರ್ದೆಲ್ ಊರಿನ ರೈತರಾದ ವಾಮನ ಬಂಗೇರ ಅವರು ಯೋಜನೆ ಟವರ್ ನಿರ್ಮಾಣಕ್ಕೆ ಜಮೀನು ನೀಡಿ ಸಹಕರಿಸಿದ್ದಕ್ಕಾಗಿ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಗಿದೆ. ಕಸಬಾ ಗ್ರಾಮದ ಪಶುಪತಿ ಅವರು ಕಾಮಗಾರಿ ಸುಗಮವಾಗಿ ನಡೆಯಲು ಬೇಕಾದ ತಾತ್ಕಾಲಿಕ ರಸ್ತೆ ಸೌಕರ್ಯವನ್ನು ತಮ್ಮ ಜಮೀನಿನಲ್ಲಿ ಒದಗಿಸಿಕೊಡುವ ಮೂಲಕ ಔದಾರ್ಯ ಮೆರೆದಿದ್ದು, ಅವರ ನಿವಾಸದಲ್ಲೇ ಅಭಿನಂದನಾ ಪತ್ರ ನೀಡಿ ಕೃತಜ್ಞತೆ ಸಲ್ಲಿಸಲಾಗಿದೆ. ಪಂಜಿಕಲ್ಲು ಗ್ರಾಮದ ಮುಕುಡ ನಿವಾಸಿಗಳಾದ ಅಲ್ಬನ್ ಪಿಂಟೋ ಹಾಗೂ ಹಿರಿಯ ರೈತರಾದ ಚಾರ್ಲ್ಸ್ ಜೆ. ಸ್ವಿಕ್ವೇರ ಅವರು ದೇಶದ ಮಹತ್ವದ ಯೋಜನೆಗೆ ತೋರಿದ ಸಹಕಾರವನ್ನು ಶ್ಲಾಘಿಸಿದರು.
ಅರಳ ಗ್ರಾಮದ ಮುಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಅವರು ಕೂಡ ರಾಷ್ಟ್ರ ನಿರ್ಮಾಣದ ಈ ಯೋಜನೆಗೆ ಜಾಗ ನೀಡಿದ್ದು, ಸಮಿತಿ ಪ್ರಮುಖರನ್ನು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
What do you feel about this post?
Like
Love
Happy
Haha
Sad
