ಉ. ಕ ಜಿಲ್ಲೆಗೆ ಆರೆಂಜ್ ಅಲರ್ಟ್, ಜುಲೈ 2 ರವರೆಗೆ ಭಾರೀ ಮಳೆ ಸಾಧ್ಯತೆ ಎಚ್ಚರ ವಹಿಸಿ: ಡಿಸಿ ಲಕ್ಷ್ಮೀಪ್ರಿಯಾ

ಜಿಲ್ಲಾ ಸುದ್ದಿ ಕಾರವಾರ ಮಳೆ ಸುದ್ದಿ ಶಿರಸಿ

Spread the love

ಕಾರವಾರ: ಭಾರತೀಯ ಹವಾಮಾನ ಇಲಾಖೆ ಉತ್ತರ ಕನ್ನಡ ಜಿಲ್ಲೆಗೆ ಜೂನ್ 30, ಮಧ್ಯಾಹ್ನ 1 ಗಂಟೆಯಿಂದ ಜುಲೈ 2ರ ಬೆಳಗ್ಗೆ 8.30 ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಗಂಟೆಗೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಜತೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜನರು ಹಾಗೂ ಮೀನುಗಾರರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

<

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಕಾರ್ಯನಿರ್ವಹಣೆಗೆ ಸಜ್ಜುಗೊಳಿಸಲಾಗಿದೆ. ಹವಾಮಾನ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿ ಅಧಿಕೃತ ಸಾಮಾಜಿಕ ಜಾಲತಾಣಗಳು ಹಾಗೂ ಸ್ಥಳೀಯ ಸುದ್ದಿಮಾಧ್ಯಮಗಳ ಮೂಲಕ ಸಾರ್ವಜನಿಕರು ನಿರಂತರ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಾರದು. ಸಾರ್ವಜನಿಕರು, ವಿಶೇಷವಾಗಿ ಮಕ್ಕಳು, ನದಿ, ಕೆರೆ, ತಗ್ಗು ಪ್ರದೇಶ ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಪಾಲಕರು ಎಚ್ಚರ ವಹಿಸಬೇಕು. ಪ್ರವಾಸಿಗರು ಸಹ ನದಿ ಮತ್ತು ಸಮುದ್ರ ಪ್ರದೇಶಗಳಿಗೆ ಇಳಿಯುವುದನ್ನು ಸಂಪೂರ್ಣವಾಗಿ ತಪ್ಪಿಸುವಂತೆ ತಿಳಿಸಿದ್ದಾರೆ.

ಮಳೆ, ಗುಡುಗು ಹಾಗೂ ಸಿಡಿಲಿನ ಸಂದರ್ಭಗಳಲ್ಲಿ ಕೃಷಿಕರು ಕೃಷಿ ಚಟುವಟಿಕೆಗಳಿಂದ ದೂರವಿರಬೇಕು. ಸಾರ್ವಜನಿಕರು ಹಾಗೂ ಕಾರ್ಮಿಕರು ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ಮರಗಳ ಕೆಳಗೆ, ಹಳೆಯ ಅಥವಾ ಶಿಥಿಲ ಕಟ್ಟಡಗಳ ಬಳಿ ಹಾಗೂ ವಿದ್ಯುತ್ ಕಂಬಗಳ ಸಮೀಪ ನಿಲ್ಲಬಾರದು. ತುಂಡಾದ ವಿದ್ಯುತ್ ತಂತಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ತಗ್ಗು ಪ್ರದೇಶಗಳಲ್ಲಿ ಅಥವಾ ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ಅಗತ್ಯವಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರ್ ಅವರು ಗುರುತಿಸಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಬೇಕು. ಗ್ರಾಮೀಣ ಪ್ರದೇಶಗಳಲ್ಲಿನ ಕಾಲುಸಂಕ, ಕಿರು ಸೇತುವೆಗಳನ್ನು ದಾಟುವಾಗಲೂ ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.

ಶಿಥಿಲಗೊಂಡ ಮನೆ, ಗೋಡೆ ಅಥವಾ ಅಪಾಯಕಾರಿ ಕಟ್ಟಡಗಳ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣವೇ ಜಿಲ್ಲಾಡಳಿತಕ್ಕೆ ತಿಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿ 08382-229857 ಅಥವಾ ವಾಟ್ಸಾಪ್ ಸಂಖ್ಯೆ 9483511015 ಹಾಗೂ ಸಂಬಂಧಪಟ್ಟ ತಾಲೂಕು ತಹಶೀಲ್ದಾರ್ ಅವರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *