ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ, ಸಾರ್ವಜನಿಕರ ನೀರಿನ ಸಮಸ್ಯೆಯ ದೂರುಗಳಿಗೆ ತಕ್ಷಣವೇ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕುಮಟಾ ಉಪ ವಿಭಾಗಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ಕುಡಿವ ನೀರಿನ ಸಮಸ್ಯೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈ ಬಾರಿ ಕುಡಿಯುವ ನೀರಿನ ಅಭಾವದಿಂದ ಜನರು ತೊಂದರೆಗಿಡಾಗಿದ್ದು, ಕುಡಿಯುವ ನೀರಿನ ಮೂಲಗಳು ಇಲ್ಲದೇ ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸುವಂತೆ ನಿರ್ದೇಶನ ನೀಡಿದ ಅವರು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರಿಗೆ 15 ದಿನಗಳ ಒಳಗೆ ಹಣ ಪಾವತಿಸಬೇಕು. ಜಲ ಜೀವನ ಮೀಷನ್ ಮೂಲಕ ಪ್ರತಿ ಮನೆಗಳಿಗೆ ನೀರಿನ ನಳ ಅಳವಡಿಸಿದರೂ ಕೂಡ ನೀರು ಸರಬರಾಜು ಮಾಡಲು ಇಲಾಖೆ ವಿಫಲವಾಗಿದೆ. ಎಲ್ಲಾ ತಾಲೂಕುಗಳಲ್ಲಿ ಕನಿಷ್ಠ 100 ಕೋಟಿಯ ಜೆಜೆಎಂ ಕಾಮಗಾರಿಗಳು ನಡೆಯುತ್ತಿದ್ದು, ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲಾ ತಾಲೂಕಿಗೆ ಟಾಸ್ಕ್ ಪೋರ್ಸ್ ಅಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ರೂ.25 ಲಕ್ಷ ಅನುದಾನ ಹಂಚಿಕೆಯಗಿದ್ದು, ಜಿಲ್ಲೆಗೆ ಇನ್ನೂ 3 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬರಲಿದೆ. ಕುಡಿಯುವ ನೀರಿನ ಸಮಸ್ಯೆ ಗೆ ಯಾವುದೇ ಅನುದಾನದ ಕೊರತೆಯಿಲ್ಲ, ಇನ್ನೂ ಹೆಚ್ಚುವರಿ ಅನುದಾನದ ಅಗತ್ಯವಿದ್ದರೂ ಕೂಡಾ ಸರ್ಕಾರ ದಿಂದ ಬಿಡುಗಡೆ ಮಾಡಿಸಲಾಗುವದು. ಯಾವುದೇ ಸಂದರ್ಭದಲ್ಲೂ ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ಎಚ್ಚರ ವಹಿಸಿ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿರಸಿ ತಾಲೂಕಿನ 14 ಗ್ರಾಮ ಪಂಚಾಯತ್ ಮತ್ತು ಸಿದ್ದಾಪುರ ತಾಲೂಕಿನ 19 ಗ್ರಾಮ ಪಂಚಾಯತಗಳಲ್ಲಿ ಕುಡಿಯುವ ನೀರಿನ ಅಭಾವವಾಗಿದೆ. ಬಹುತೇಕ ಈ ಭಾಗದ ಕೆರೆಗಳು ಬತ್ತಿರುವುದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೆಜೆಎಂ ಮೂಲಕವೂ ನೀರು ಸರಬರಾಜು ಆಗುತ್ತಿಲ್ಲ ಎಂದರು.
ಕುಡಿಯುವ ನೀರಿನ ಸಮಸ್ಯೆ ಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವoತೆ ತಹಸೀಲ್ದಾರ್ ಕಚೇರಿ ಮತ್ತು ತಾ. ಪಂ. ಕಚೇರಿ ಗಳಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ತೆರೆಯುವಂತೆ ತಿಳಿಸಿದರು.
ಕಾರವಾರ ಭಟ್ಕಳವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರoಭಗೊಂಡು 15 ವರ್ಷ ಆದ್ರೂ ಮುಕ್ತಾಯವಾಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು, ಕಾಮಗಾರಿಯ ಮುಕ್ತಾಯಕ್ಕೆ ಅನಗತ್ಯ ವಿಳಂಬ ಮಾಡದೇ ಬಾಕಿ ಇರುವ ಎಲ್ಲಾ ಪ್ರಪೋಸಲ್ಗಳನ್ನು ಒಂದೇ ಬಾರಿ ಸಲ್ಲಿಸಿ ಅಗತ್ಯ ಅನುಮೋದನೆ ಪಡೆದು ಕಾಮಗಾರಿಗೆ ವೇಗ ನೀಡುವಂತೆ ನಿರ್ದೇಶನ ನೀಡಿದರು.
ಸಿರಸಿಯಿಂದ ಹಾವೇರಿ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಸಿದಂತೆ ಮಳೆಗಾಲದಲ್ಲಿ ಸಾರ್ವಜನಿರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮಳೆಗಾಲಕ್ಕೆ ಮೊದಲು ಒಂದು ಲೇಯರ್ ಆದ್ರೂ ಡಾಂಬರ್ ಹಾಕಿ ವಾಹನ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದ ಅವರು, ಕಾಮಗಾರಿ ಮುಕ್ತಾಯಕ್ಕೆ ನಿಗದಿ ಪಡಿಸಿರುವ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡದಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.
ಸಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣ ಆಗಿದೆ, ಧೂಳಿನಿಂದ ಉಸಿರಾಟ ಸಮಸ್ಯೆ ಕಂಡುಬರುತ್ತಿದೆ, ಕೊನೆಯ ಪಕ್ಷ ಧೂಳು ಏಳದಂತೆ ನೀರು ಸಿಂಪಡಿಸುವ ಕೆಲಸವೂ ಆಗುತ್ತಿಲ್ಲ, ಜನಪ್ರತಿನಿದಿಗಳು ಪ್ರತಿನಿತ್ಯ ಸಾರ್ವಜನಿಕರಿಂದ ದೂರು ಕೇಳುವಂತಾಗಿದೆ ಮಳೆಗಾಲ ಆರಂಭವಾಗುವುದರ ಒಳಗೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಾ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮೆಸ್ಕಾಂ ವತಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಮ್ ಗಳ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಅಂಗನವಾಡಿ, ಶಾಲೆ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಮತ್ತು ಯಾವುದೇ ಅನಾಹುತ ಸಂಭವಿಸಿದಲ್ಲಿ 24 ಗಂಟೆಯ ಒಳಗೆ ಪರಿಹಾರ ವಿತರಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅಪರ ಜಿಲ್ಲಾಧಿಕಾರಿ, ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ್ ಕುಮಾರ್ , ಎಲ್ಲಾ ತಹಶೀಲ್ದಾರ್ ಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.




