ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಯಶಸ್ವಿಗಾಗಿ ಜಿಲ್ಲೆಯಾದ್ಯಂತ ಮನೆಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ 30 ರಿಂದ ಜುಲೈ 29 ರವರೆಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯೂಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯ ನಡೆಸಲಿದ್ದಾರೆ ಎಂದು ತಿಳಿಸಿದರು.
ಪ್ರಿ-ಫಿಲ್ಡ್ ಎನ್ಯೂಮರೇಷನ್ ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿ ಮರಳಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಮತದಾರರು ಹಾಗೂ ಮತಗಟ್ಟೆ ಅಧಿಕಾರಿಗಳ ಸಹಿ ಅನಿವಾರ್ಯವಾಗಿದೆ. ಈ ಕುರಿತು ಯಾವುದೇ ಗೊಂದಲ ಉಂಟಾಗದಂತೆ ವ್ಯಾಪಕವಾಗಿ ಮಾಹಿತಿ ಹಂಚಬೇಕು ಎಂದು ಅವರು ಹೇಳಿದರು.
ಕಾಲೇಜುಗಳ ಸಾಕ್ಷರತಾ ಘಟಕಗಳು, ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಮಾಹಿತಿ ತಲುಪಿಸುವ ಪತ್ರ ಅಭಿಯಾನ, ಬೈಕ್ ಜಾಥಾ, ಮಾನವ ಸರಪಳಿ ಸೇರಿದಂತೆ ವಿಭಿನ್ನ ಮಾದರಿಯ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಸೂಚಿಸಿದರು.
ಪ್ರವಾಸಿ ತಾಣಗಳು, ಜನಸಂಚಾರ ಹೆಚ್ಚಿರುವ ಪ್ರದೇಶಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ನಿರ್ದೇಶಿಸಿದರು. ತಾಲೂಕು ಪಂಚಾಯತ್‌ಗಳು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಬೇಕು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ವತಿಯಿಂದ ಕ್ರೀಡಾಕೂಟಗಳು, ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆಗಳು, ಭಾಷಣ ಸ್ಪರ್ಧೆಗಳು ಹಾಗೂ ಆರೋಗ್ಯ ಶಿಬಿರಗಳನ್ನು ಒಳಗೊಂಡ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಎಲ್ಲಾ ಹಂತದ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಮುಖ್ಯ ಲೆಕ್ಕಾಧಿಕಾರಿ ಆನಂದ ಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಯೋಜನಾ ನಿರ್ದೇಶಕ ಕರೀಂ ಅಸಾದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
What do you feel about this post?
Like
Love
Happy
Haha
Sad
