ಮಂಗಳೂರು: ನಗರದಲ್ಲಿ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಿಡೀರ್ ದಾಳಿ ಮುಂದುವರೆಸಿದ್ದು, ಶನಿವಾರ ಸಿಟಿ ಸೆಂಟರ್ ಮಾಲ್ ನಲ್ಲಿ ಇದ್ದ ಮಳಿಗೆ ಮೇಲೆ ದಾಳಿ ಮಾಡಿ, ಸುರಕ್ಷತೆ ಹಾಗೂ ಕೊಳೆತ ಮಾಂಸ ಪತ್ತೆ ಆಗಿರುವ ಹಿನ್ನಲೆಯಲ್ಲಿ ಬಂದ್ ಮಾಡಿಸಿದ್ದರು. ಇದರ ಬೆನ್ನಲ್ಲೆ ಭಾನುವಾರ ಮೆಕ್ಡನಾಲ್ಡ್ಸ್ ಫ್ಯಾಮಿಲಿ ರೆಸ್ಟೋರೆಂಟ್‌ಗೆ ದಾಳಿ ಮಾಡಿ ಅಧಿಕಾರಿಗಳು ಗುಣಮಟ್ಟ ಹಾಗೂ ಶುಚಿತ್ವವನ್ನು ಪರಿಶೀಲನೆ ನಡೆಸಿದರು.
ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಮಳಿಗೆಯ ಅಡುಗೆ ಕೋಣೆ, ಶೇಖರಣಾ ಕೊಠಡಿ, ಶೀತಲೀಕರಣ ಘಟಕ ಹಾಗೂ ಆಳ ಶೀತಲೀಕರಣ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ತಾಪಮಾನ, ಬ್ರೆಡ್, ಬನ್, ಸಾಸ್, ತರಕಾರಿ ಹಾಗೂ ಬರ್ಗರ್ ತಯಾರಿಕೆಗೆ ಬಳಸುವ ಇತರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಲಾಯಿತು.

ಪರಿಶೀಲನೆ ವೇಳೆ ಬರ್ಗರ್ ತಯಾರಿಕೆಗೆ ಬಳಸುವ ಬನ್‌ಗಳ ಆಹಾರ ಮಾದರಿ ಹಾಗೂ ಹಸಿ ಚಿಕನ್ ಮಾದರಿ ಸಂಗ್ರಹಿಸಲಾಗಿದೆ. ಅಲ್ಲದೆ, ಮೇಯನೀಸ್‌ನ ಮಾದರಿ ಪರೀಕ್ಷೆಗಾಗಿ ಪಡೆದುಕೊಂಡಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಪರಿಶೀಲನೆ ನಡೆಸಿದ ವೇಳೆ ಯಾವುದೇ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆ ಆಗಿಲ್ಲ. ಸಂಗ್ರಹಿಸಲಾದ ಆಹಾರ ಮಾದರಿಗಳನ್ನು ಅಗತ್ಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ಮುಂದುವರೆಯಲಿದ್ದು, ದಿಡೀರ್ ದಾಳಿ ನಡೆಸುವ ಕೆಲಸ ಮಾಡಲಾಗುತ್ತಿದ್ದು, ಶನಿವಾರ ಮಳೆಗೆಯೊಂದರ ಮೇಲೆ ದಾಳಿ ಮಾಡಿದ್ದ ವೇಳೆ ಹಳಸಿದ ಮಾಂಸ, ಅವಧಿ ಮೀರಿದ ಎಣ್ಣೆ ಹಾಗೂ ಅನೈರ್ಮಲ್ಯ ಪತ್ತೆ ಆಗಿದ್ದು, ಭಾನುವಾರ ಕೂಡ ದಾಳಿ ಮುಂದುವರೆದಿದ್ದು, ಮೆಕ್ಡನಾಲ್ಡ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದು, ಗುಣಮಟ್ಟವನ್ನು ಪರಿಶೀಲನೆ ಮಾಡಲಾಗಿದೆ. ಶುಚಿತ್ವ ಹಾಗೂ ಗುಣಮಟ್ಟದ ಆಹಾರ ತಯಾರಿಸುವುದಕ್ಕೆ ಆದ್ಯತೆ ನೀಡುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಅವರು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad





