ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ದಿನವಿಡೀ ಹವಾಮಾನದಲ್ಲಿ ಏರುಪೇರು ಕಂಡುಬಂತು. ಜಿಲ್ಲೆಯ ಹಲವೆಡೆ ಬಿಟ್ಟುಬಿಟ್ಟು ಮಳೆಯಾಗಿದ್ದು, ಸಂಜೆ ವೇಳೆಗೆ ಬೆಳ್ತಂಗಡಿ, ಸುಳ್ಯ ಹಾಗೂ ಪುತ್ತೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಮಂಗಳೂರು, ಉಳ್ಳಾಲ, ಬಂಟ್ವಾಳ ಮತ್ತು ಮೂಲ್ಕಿ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಕುಂಠಿತಗೊಂಡಿದ್ದ ಮಳೆ ಚಟುವಟಿಕೆ ಮತ್ತೆ ಚುರುಕುಗೊಳ್ಳುವ ನಿರೀಕ್ಷೆ ಇದೆ.
ಜಿಲ್ಲಾಡಳಿತದ ಮಳೆ ಅಂಕಿ-ಅಂಶಗಳ ಪ್ರಕಾರ, ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 10.5 ಮಿ.ಮೀ. ಮಳೆ ದಾಖಲಾಗಿದೆ. ಕಡಬ ತಾಲೂಕಿನಲ್ಲಿ ಅತಿ ಹೆಚ್ಚು 27.3 ಮಿ.ಮೀ. ಮಳೆಯಾಗಿದ್ದು, ಪುತ್ತೂರಿನಲ್ಲಿ 11.3 ಮಿ.ಮೀ., ಉಳ್ಳಾಲದಲ್ಲಿ 10.4 ಮಿ.ಮೀ., ಬೆಳ್ತಂಗಡಿಯಲ್ಲಿ 9.4 ಮಿ.ಮೀ., ಬಂಟ್ವಾಳದಲ್ಲಿ 7.8 ಮಿ.ಮೀ., ಸುಳ್ಯದಲ್ಲಿ 5.3 ಮಿ.ಮೀ., ಮಂಗಳೂರಿನಲ್ಲಿ 4.3 ಮಿ.ಮೀ., ಮೂಲ್ಕಿಯಲ್ಲಿ 4.1 ಮಿ.ಮೀ. ಹಾಗೂ ಮೂಡುಬಿದಿರೆಯಲ್ಲಿ 2.3 ಮಿ.ಮೀ. ಮಳೆಯಾಗಿದೆ.
ಇದೇ ವೇಳೆ, ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜೂನ್ 10ರಿಂದ ಜಿಲ್ಲೆಯಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ಜೂನ್ 12ರವರೆಗೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಕೃಷಿಕರಲ್ಲಿ ಆಶಾಭಾವನೆ ಮೂಡಿಸಿದೆ.
What do you feel about this post?
Like
Love
Happy
Haha
Sad
