ಮಕ್ಕಳ ರಕ್ಷಣೆಗಾಗಿ ಶಾಲೆಗಳಲ್ಲಿ ಕಾನೂನು ಅರಿವು ಅಭಿಯಾನ: ಕಾರವಾರದಲ್ಲಿ ಕಾರ್ಯಾಗಾರ

ಜಿಲ್ಲಾ ಸುದ್ದಿ ಕಾರವಾರ ಶಿಕ್ಷಣ ಶಿರಸಿ

Spread the love

ಕಾರವಾರ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಇತರ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಕಾನೂನು ಅರಿವು ಮೂಡಿಸುವ ಅಭಿಯಾನ ಆರಂಭಿಸಲಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ ಕಾರವಾರದ ಬಾಲಮಂದಿರ ಪ್ರೌಢಶಾಲೆಯಲ್ಲಿ ‘ಸುರಕ್ಷಿತ ಬಚ್ಪನ್ ಅಭಿಯಾನ’ದಡಿ ಮಕ್ಕಳ ರಕ್ಷಣೆ ಕುರಿತು ಕಾನೂನು ಅರಿವು ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಅವರು ಮಕ್ಕಳ ರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.

ಬಳಿಕ ವಕೀಲರಾದ ಸುಭಾ ಗಾಂವಕರ, ಕಾರವಾರ ವಿಭಾಗದ ಡಿವೈಎಸ್ಪಿ ಬಿ.ಎಸ್. ಲೋಕಾಪುರ ಹಾಗೂ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರ ದೇವಿದಾಸ ಎನ್. ನಾಯ್ಕ್ ಅವರು ಮಕ್ಕಳಿಗೆ ಕಾನೂನಿನ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡಿದರು. ಮಕ್ಕಳ ಹಕ್ಕುಗಳು, ಅವರ ಸುರಕ್ಷತೆ ಹಾಗೂ ದೌರ್ಜನ್ಯಗಳ ವಿರುದ್ಧ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

ಶಾಲಾ ಮಕ್ಕಳು ಸ್ವಾಗತ ಭಾಷಣ ಹಾಗೂ ಸ್ವಾಗತಗೀತೆ ಪ್ರಸ್ತುತ ಪಡಿಸಿದರು. ಮುಖ್ಯ ಶಿಕ್ಷಕಿ ಅಂಜಲಿ ಮಾನೆ ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.

ಜಿಲ್ಲೆಯ ಎಲ್ಲ ಶಾಲೆಗಳಿಗೆ ಅಭಿಯಾನ ವಿಸ್ತರಣೆ

2026ರ ಅಕ್ಟೋಬರ್ 26ರಿಂದ ಆರಂಭವಾಗಿರುವ ಈ ಅಭಿಯಾನದಡಿ ಈಗಾಗಲೇ ಆಮದಳ್ಳಿ ವಸತಿ ಶಾಲೆ, ಕಾರವಾರದ ಸೇಂಟ್ ಮೈಕಲ್ ಶಾಲೆ, ಸರ್ಕಾರಿ ಪ್ರೌಢಶಾಲೆ ಹಾಗೂ ಸೇಂಟ್ ಜೋಸೆಫ್ ಪ್ರೌಢಶಾಲೆಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಇತರ ಅಪರಾಧಗಳ ಕುರಿತು ಜಾಗೃತಿ ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದರ ಜತೆಗೆ, ತಮ್ಮ ಹಕ್ಕುಗಳು ಮತ್ತು ರಕ್ಷಣೆಗೆ ಲಭ್ಯವಿರುವ ಕಾನೂನು ನೆರವಿನ ಬಗ್ಗೆ ತಿಳಿವಳಿಕೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *