‘ಆಟಿದ ಪೊರ್ಲು’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸುರತ್ಕಲ್ ಬಂಟರ ಸಂಘದ ಗುಣಗಾನ ಮಾಡಿದ ಐಕಳ ಹರೀಶ್ ಶೆಟ್ಟಿ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಸುರತ್ಕಲ್: ಇಲ್ಲಿನ ಬಂಟರ ಸಂಘದ ಒಗ್ಗಟ್ಟು ಇತರ ಸಂಘ–ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

<

ಸುರತ್ಕಲ್ ಬಂಟರ ಸಂಘ ಹಾಗೂ ಮಹಿಳಾ ವೇದಿಕೆ ಬಂಟರ ಸಂಘದ ಸಹಯೋಗದಲ್ಲಿ ಸುರತ್ಕಲ್ ಬಂಟರ ಭವನದಲ್ಲಿ ಆಯೋಜಿಸಿದ್ದ ‘ಆಟಿದ ಪೊರ್ಲು’ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಟಿ ತಿಂಗಳಲ್ಲಿ ಮನೆ ಮನೆಗೆ ತೆರಳಿ ಸಾಂಪ್ರದಾಯಿಕವಾಗಿ ಪ್ರದರ್ಶನ ನೀಡುವ ‘ಚಿಕ್ಕಮೇಳ’ವು ಗುತ್ತಿನ ಮನೆಯ ಚಾವಡಿಗೆ ಆಗಮಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

‘ಆಟಿದ ಪೊರ್ಲು’ ಕಾರ್ಯಕ್ರಮದ ಮೂಲಕ ಗಡಿಪ್ರಧಾನರು ಹಾಗೂ ಹಿರಿಯರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ. ಹಿರಿಯರನ್ನು ಮುಂದಿಟ್ಟುಕೊಂಡು ಕಿರಿಯರು ಒಗ್ಗೂಡಿ ನಡೆಸುವ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಂತಸದ ವಿಚಾರ ಎಂದರು.

ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಮಾತನಾಡಿ, ಬಂಟರ ವೇದಿಕೆಯಲ್ಲಿ ಪಕ್ಷಭೇದಕ್ಕೆ ಅವಕಾಶವಿಲ್ಲ. ಬಂಟ ಸಮಾಜದ ಎಲ್ಲರೂ ಒಗ್ಗೂಡಿ ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಬಂಟ ಸಮಾಜದ ಯಾವುದೇ ಕಾರ್ಯಕ್ರಮವಿದ್ದರೂ ತಮ್ಮ ಸಹಕಾರ ಮುಂದುವರಿಯಲಿದೆ. ಸುರತ್ಕಲ್ ಬಂಟರ ಸಂಘವು ಹೊಸ ಕಟ್ಟಡ ನಿರ್ಮಿಸುವ ಉದ್ದೇಶ ಹೊಂದಿದ್ದು, ಅದಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಪಾದುವಾ ಕಾಲೇಜಿನ ಪ್ರಾಧ್ಯಾಪಕ ಅಕ್ಷಯ ಆರ್. ಶೆಟ್ಟಿ ದಿಕ್ಸೂಚಿ ಭಾಷಣದಲ್ಲಿ, ಆಟಿ ತಿಂಗಳು ಇಂದು ಆಚರಣೆಯ ರೂಪ ಪಡೆದುಕೊಂಡಿದೆ. ಹಿಂದೆ ಹಿರಿಯರು ಅನುಭವಿಸುತ್ತಿದ್ದ ಆಟಿ ತಿಂಗಳ ಕಷ್ಟಗಳು ಈಗ ಕಾಣಿಸುತ್ತಿಲ್ಲ. ಧಾರಾಕಾರ ಮಳೆ, ಪ್ರಕೃತಿಯ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಹಿರಿಯರು ಆಟಿ ತಿಂಗಳಲ್ಲಿ ಪ್ರಕೃತಿದತ್ತವಾಗಿ ದೊರೆಯುತ್ತಿದ್ದ ಆಹಾರವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು ಎಂದರು.

ಕಾಲ ಬದಲಾಗಿದ್ದು, ಆಟಿ ತಿಂಗಳು ಇಂದು ಆಚರಣೆಗೆ ಸೀಮಿತವಾಗುತ್ತಿದೆ. ಆಟಿ ತಿಂಗಳ ಮಹತ್ವವನ್ನು ಅರಿತು ಆಚರಿಸಿದರೆ ಹಿರಿಯರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಆಟಿದ ಪೊರ್ಲು’ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸಂಘದ ಎಲ್ಲರ ಪರಿಶ್ರಮವಿದೆ. ಒಂದು ತಿಂಗಳಿನಿಂದ ಸಿದ್ಧತೆ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದ್ದಾರೆ ಎಂದರು.

ಬಂಟ ಸಮಾಜದ ಸಾಧಕರಷ್ಟೇ ಅಲ್ಲದೆ ಇತರ ಸಮಾಜದವರನ್ನೂ ಗುರುತಿಸಿ ಗೌರವಿಸಿರುವುದು ಕಾರ್ಯಕ್ರಮದ ವಿಶೇಷತೆ. ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಕಟೀಲು ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಮಹಿಳಾ ವೇದಿಕೆ ಅಧ್ಯಕ್ಷೆ ಸರೋಜ ಟಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಉಪಾಧ್ಯಕ್ಷ ಪ್ರವೀಣ್ ಪಿ. ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಮಹಿಳಾ ಘಟಕದ ಕಾರ್ಯದರ್ಶಿ ರಾಜೇಶ್ವರಿ ಡಿ. ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ. ಶೆಟ್ಟಿ, ಉಪಾಧ್ಯಕ್ಷೆ ಜಯಂತಿ ಪಿ.ಟಿ. ರೈ ಇದ್ದರು.

ಡಾ. ಸುಧಾಚಂದ್ರಶೇಖರ ಶೆಟ್ಟಿ ಹಾಗೂ ಸೌಮ್ಯ ಭಂಡಾರಿ ನಿರೂಪಿಸಿದರು.

ಬಳಿಕ ರಾಜೇಶ್ವರಿ ಡಿ. ಶೆಟ್ಟಿ ಅವರ ನಿರ್ದೇಶನದಲ್ಲಿ ಸುಮಾರು 50 ಮಹಿಳೆಯರು ಭಾಗವಹಿಸಿದ್ದ ‘ಸೆರಗು’ ಕಿರು ಪ್ರಹಸನ ನಡೆಯಿತು. ಮಕ್ಕಳಿಂದ ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ವಾಮನ ಶೆಟ್ಟಿ ಸೂರಿಂಜೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದ ಗೀತಾ ಸುರತ್ಕಲ್, ಭರತನಾಟ್ಯ ಕ್ಷೇತ್ರದ ಚಂದ್ರಶೇಖರ ನಾವಡ ಚೇಳಾಯರು, ಲಲಿತಕಲೆ ಕ್ಷೇತ್ರದ ಧನಪಾಲ್ ಶೆಟ್ಟಿಗಾರ್ ತಡಂಬೈಲ್ ಹಾಗೂ ಗುಡಿ ಕೈಗಾರಿಕೆ ಕ್ಷೇತ್ರದ ವಾರಿಜ ಡಿ. ಬಂಗೇರ ಕುಳಾಯಿ ಅವರನ್ನು ಸನ್ಮಾನಿಸಲಾಯಿತು.

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡು, ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿ ಪಡೆದ ಯುಕ್ತಿ ಶೆಟ್ಟಿ ಅವರನ್ನು ಕೂಡ ಗೌರವಿಸಲಾಯಿತು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *