ಕುಂದಾಪುರ: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಬುಧವಾರ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಿದ್ದು, ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರೆ ಬೋಟಿನ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಗಂಗೊಳ್ಳಿ ಬಂದರಿನಿಂದ ಬುಧವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಕುಂಭಾಶಿ ಕೊರವಡಿಯ ಸಂತೋಷ್ ಎ. ಅವರಿಗೆ ಸೇರಿದ ‘ಮಂಜುನಾಥ ಸಾಗರ’ ಹೆಸರಿನ ತ್ರಿಸೆವೆಂಟಿ ಬೋಟ್ ಅಳಿವೆ ಪ್ರದೇಶದಲ್ಲಿ ಮುಳುಗಿತು.
ಘಟನೆ ತಿಳಿಯುತ್ತಿದ್ದಂತೆ ಇತರೆ ಮೀನುಗಾರರು ಪರ್ಸಿನ್ ಬೋಟ್ ಮೂಲಕ ಸ್ಥಳಕ್ಕೆ ತೆರಳಿ ಅಪಾಯದಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಬಳಿಕ ನೀರಿನಲ್ಲಿ ಮುಳುಗುತ್ತಿದ್ದ ಬೋಟ್‌ನ್ನು ಮತ್ತೊಂದು ಬೋಟ್‌ನ ಸಹಾಯದಿಂದ ಎಳೆದು ಗಂಗೊಳ್ಳಿ ಬಂದರಿಗೆ ತರಲಾಯಿತು.
ಬೋಟ್ ಭಾಗಶಃ ಮುಳುಗಿದ್ದರಿಂದ ಅದರಲ್ಲಿದ್ದ ಮೀನುಗಾರಿಕಾ ಬಲೆಗಳು ಹಾಗೂ ಇತರೆ ಸಲಕರಣೆಗಳು ಸಂಪೂರ್ಣ ಹಾನಿಗೊಂಡಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಬಳಿಕ ಕರಾವಳಿ ಕಾವಲು ಪೊಲೀಸ್ ಇಲಾಖೆಯ ವಿರುದ್ಧ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಬೇಕಾದ ಬೋಟ್ ನಿಷ್ಕ್ರಿಯಗೊಂಡು ಇನ್ನೂ ಬಂದರಿನಲ್ಲೇ ನಿಂತಿದೆ. ಮೀನುಗಾರಿಕೆ ಆರಂಭವಾಗಿ ತಿಂಗಳು ಕಳೆದರೂ ರಕ್ಷಣಾ ಬೋಟ್ ಅನ್ನು ಸಮುದ್ರಕ್ಕೆ ಇಳಿಸಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.
ಇದೇ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಕಳೆದ ವಾರವೂ ಪರ್ಸಿನ್ ಬೋಟ್ ಸಂಪೂರ್ಣ ಮುಳುಗಡೆಯಾಗಿತ್ತು. ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ವ್ಯವಸ್ಥೆಯನ್ನು ತಕ್ಷಣವೇ ಬಲಪಡಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
What do you feel about this post?
Like
Love
Happy
Haha
Sad





