ಮಂಗಳೂರು: ಕಲಾಸಾಧನ ಸಂಸ್ಥೆಯ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಇದೇ 6 ರಂದು ಸಂಜೆ 5 ಗಂಟೆಗೆ ನಗರದ ರಾಮಕೃಷ್ಣ ಮಠದಲ್ಲಿ ‘ರಾಗ ಸುಧಾ’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಸಾಧನ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ವಾಲಿಯರ್ ಘರಾನಾ ಕಲಾವಿದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯ, ಖ್ಯಾತ ಗಾಯಕ ಆದಿತ್ಯ ಮೋದಕ್, ಗ್ವಾಲಿಯರ್– ಕಿರಾಣಾ ಪದ್ಧತಿಯ ಗಾಯಕ ಹಾಗೂ ಹಾರ್ಮೋನಿಯಂ ವಾದಕ ಸತೀಶ್ ಭಟ್ ಹೆಗ್ಗಾರ್ ಮತ್ತು ಪಂಡಿತ್ ಮಾಣಿಕ್ ರಾವ್ ಅವರ ಶಿಷ್ಯ, ತಬಲಾ ವಾದಕ ಹಾಗೂ ಗಾಯಕ ಅಕ್ಷಯ ಜೋಶಿ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಕಲಾವಿದರಿಗೆ ಸನ್ಮಾನ ನಡೆಯಲಿದೆ. ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.
ಕಲಾಸಾಧನ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಚುರಪಡಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿಯನ್ನೂ ನೀಡಲಾಗುತ್ತಿದೆ ಎಂದರು.
ಚಂದ್ರಕಾಂತ್ ಪಾರ್ಕರ್ ಅವರಲ್ಲಿ ಐದು ವರ್ಷ ಹಾಗೂ ಶ್ರೀ ಪ್ರದೀಪ್ ಧೋಂಡ್ ಅವರಲ್ಲಿ ನಾಲ್ಕು ವರ್ಷ ಸಂಗೀತಾಭ್ಯಾಸ ನಡೆಸಿರುವ ಆದಿತ್ಯ ಮೋದಕ್, ಬಳಿಕ ಗ್ವಾಲಿಯರ್ ಘರಾನಾ ಕಲಾವಿದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯರಲ್ಲಿ ಒಬ್ಬರಾಗಿದ್ದಾರೆ. ಪಂಡಿತ್ ರಾಮ್ ಮರಾಠೆ ಪುರಸ್ಕಾರ, ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪುರಸ್ಕಾರ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಸವಾಯಿ ಗಂಧರ್ವ, ಪಂಡಿತ್ ಭೀಮಸೇನ ಜೋಶಿ ವಿದ್ಯಾರ್ಥಿವೇತನ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದಿದ್ದಾರೆ ಎಂದರು.
ಜಾನಕಿ ಭಟ್ ಅವರಲ್ಲಿ ಪ್ರಾಥಮಿಕ ಸಂಗೀತಾಭ್ಯಾಸ ಆರಂಭಿಸಿದ ಸತೀಶ್ ಭಟ್ ಹೆಗ್ಗಾರ್, ಬಳಿಕ ವಿದ್ವಾನ್ ಗಣಪತಿ ಹೆಗಡೆ ಅವರಲ್ಲಿ ಕಳೆದ 18 ವರ್ಷಗಳಿಂದ ಗ್ವಾಲಿಯರ್–ಕಿರಾಣಾ ಪದ್ಧತಿಯಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಗೀತ ಪದವಿ ಪಡೆದಿದ್ದಾರೆ. ಹಾರ್ಮೋನಿಯಂ ಸ್ವತಂತ್ರ ವಾದನದಲ್ಲೂ ಪರಿಣತಿ ಹೊಂದಿದ್ದು, ಕೇಂದ್ರ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದಿದ್ದಾರೆ. ದೇಶದ ವಿವಿಧೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ‘ಗಾನಯೋಗಿ’ ಚಲನಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದರು.
ಪಂಡಿತ್ ಮಾಣಿಕ್ ರಾವ್ ಗೋನ್ವಾರ್ ಅವರ ಶಿಷ್ಯರಾಗಿರುವ ಅಕ್ಷಯ ಜೋಶಿ, ಪ್ರಸ್ತುತ ಧಾರವಾಡದ ಡಾ. ಪಂಡಿತ್ ರವಿಕಿರಣ್ ನಕೋಡ್ ಹಾಗೂ ಪಂಡಿತ್ ರಘುನಾಥ್ ನಕೋಡ್ ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ತಬಲಾ ಏಕ ವ್ಯಾಖ್ಯಾನ ಪ್ರದರ್ಶನದ ಜತೆಗೆ ಗಾಯನ, ವಾದ್ಯ ಸಂಗೀತ, ಜುಗಲ್‌ಬಂದಿ ಹಾಗೂ ಸಂಗೀತ ಸಂಯೋಜಿತ ಕಾರ್ಯಕ್ರಮಗಳಿಗೆ ಪಕ್ಕವಾದ್ಯ ನೀಡುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಬಾಗಲಕೋಟೆಯ ಬಿವಿವಿಎಸ್‌ನಲ್ಲಿ ನಡೆದ ತಬಲಾ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಮೈಸೂರು ದಸರಾ ಸೇರಿದಂತೆ ದೇಶ-ವಿದೇಶಗಳ ವಿವಿಧ ಕಾರ್ಯಕ್ರಮಗಳಲ್ಲಿ ತಬಲಾ ವಾದನ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಇದ್ದರು.
What do you feel about this post?
Like
Love
Happy
Haha
Sad





