ಪ್ರೊ. ರಮೇಶ್ ಮಾಂಗಳೇಕರ್ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಹರಿದು ಬಂದ ಶಿಷ್ಯ ಪಡೆ, ಭಾವುಕ ಕ್ಷಣಕ್ಕೆ ಸಾಕ್ಷಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಬೆಳಗಾವಿ: ಶಿಕ್ಷಕ ವೃತ್ತಿಗೆ ತನ್ನದೇ ಆದ ವಿಶಿಷ್ಟ ಗೌರವ ಇದೆ. ಒಬ್ಬ ಉತ್ತಮ ಶಿಕ್ಷಕ ತನ್ನ ಸುತ್ತಲಿನ ಸಮಾಜ, ತನ್ನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ತುಡಿತ ಹೊಂದಿರುತ್ತಾನೆ. ಇಂತಹ ಅಮೂಲ್ಯ ಗುಣಗಳ ಮೂಲಕ ಪ್ರೊ. ರಮೇಶ್ ಎಸ್ . ಮಾಂಗಳೇಕರ್ ಅವರು ತಮ್ಮ ಶಿಷ್ಟರ ಹೃದಯದಲ್ಲಿ ಗಟ್ಟಿ ಸ್ಥಾನ ಅಲಂಕರಿಸಿದ್ದಾರೆ. ಇದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಶೋಭಾ ಅವರು ಹೇಳಿದರು.

<

ಬೆಳಗಾವಿಯಲ್ಲಿ ಆಯೋಜಿಸಿದ್ದ ಸಮಾಜಶಾಸ್ತ್ರ ಪ್ರಾಧ್ಯಾಪಕ ಹಾಗೂ ಶಿಕ್ಷಣತಜ್ಞ ಪ್ರೊ. ರಮೇಶ ಎಸ್. ಮಾಂಗಳೇಕರ್ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ಅಷ್ಟು ಸುಲಭವಾಗಿ ಎಲ್ಲ ಶಿಕ್ಷಕರನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಒಮ್ಮೆಒಬ್ಬ ಶಿಕ್ಷಕನನ್ನು ಒಪ್ಪಿಕೊಂಡರೇ ಎಂದಿಗೂ ಮರೆಯಲ್ಲ, ಹೃದಯದಲ್ಲಿ ಶಿಕ್ಷಕನಿಗೆ ಸ್ಥಾನಕೊಡುತ್ತಾರೆ. ಅಂತಹ ವಿಶಿಷ್ಟ ಗುಣಗಳ ಮೂಲಕ ಡಾ. ರಮೇಶ್ ಮಾಂಗಳೇಕರ್ ಅವರು ತಮ್ಮದೇ ವಿದ್ಯಾರ್ಥಿಗಳ ಹೃದಯದಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಶಿಕ್ಷಕ ತನ್ನ ಮಾನವೀಯಗಳ ಮೂಲಕ ಮಾತ್ರ ಇಂತಹ ಗೌರವ ಸಾಧನೆ ಮಾಡಲು ಸಾಧ್ಯ. ಅವರಿಗಾಗಿಯೇ ಇಂತಹ ವಿಶಿಷ್ಟ ಗ್ರಂಥಗಳ ಮೂಲಕ ಅವರ ಸೇವೆಗೆ ಗೌರವ ತರುವ ಕೆಲಸವನ್ನು ಅವರ ವಿದ್ಯಾರ್ಥಿಗಳು ಮಾಡಿದ್ದಾರೆ. ಇದೊಂದು ಸ್ಮರಣೀಯ ಕಾರ್ಯಕ್ರಮ, ಇಂತಹ ಕಾರ್ಯಕ್ರಮದಲ್ಲಿ ತಾನು ಭಾಗಿ ಆಗಿದ್ದು ನನ್ನ ವೃತ್ತಿ ಜೀವನದ ಮರೆಯಲಾಗದ ಕ್ಷಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಲ್ಲಾಪುರ ಶಿವಾಜಿ ವಿವಿಯ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಎಸ್. ಎನ್. ಪವಾರ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರ ದಿಕ್ಕು ಬದಲಾಯಿಸುವ ಇಂತಹ ಸಂದಿಗ್ದ ಸ್ಥಿತಿಯಲ್ಲಿ ತಮ್ಮದೇ ವಿಶಿಷ್ಟ ಬೋಧನಾ ಶೈಲಿ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವ ಗುಣವನ್ನು ಹೊಂದಿರುವ ಮಾಂಗಳೇಕರ್ ಅವರು ಯುವ ಪೀಳಿಗೆಗೆ ಹೊಸ ಮೈಲುಗಲ್ಲು ಹಾಕಿಕೊಟ್ಟಿದ್ದಾರೆ. ಅವರ ಇಂದಿನ ಗ್ರಂಥ ಬಿಡುಗಡೆ ಹಾಗೂ ಗೌರವ ಸಮರ್ಪಣೆ ಎಂದಿಗೂ ಮರೆಯಲಾಗದ ಪ್ರೇರಣಾದಾಯಕ ಸಮಾರಂಭ ಎಂದರು.

ಗೋವಾ ಜುವಾರಿ ನಗರ ಎಂ.ಇ.ಎಸ್. ಕಾಲೇಜಿನ ನಿವೃತ್ತ ಪ್ರಾಚಾರ್ಯ ಆರ್. ಬಿ. ಪಾಟೀಲ ಅವರು ಮಾತನಾಡಿ, ಶಿಕ್ಷಕ ವೃತ್ತಿ ಜವಾಬ್ದಾರಿಯಿಂದ ಕೂಡಿರುವ ವಿಶಿಷ್ಟ ಸೇವೆ. ಇಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವಂತಹ ವಿಭಾಗ. ಸೇವಾ ಕೈಂಕರ್ಯ ತೃಪ್ತಿ ತಂದಾಗ ಇಂತಹ ಅಭಿವಂದನಾ ಕಾರ್ಯಕ್ರಮಗಳು ಪಾಠ ಹೇಳಿದ ಶಿಕ್ಷಕನಿಗೆ ದಕ್ಕುತ್ತವೆ. ಇಂತಹ ದಕ್ಕಿಸಿಕೊಳ್ಳುವ ಸಾಹಸ ಪ್ರವೃತ್ತಿ ಇರುವಂತಹ ಶಿಕ್ಷಕ ರಮೇಶ್ ಮಾಂಗಳೇಕರ್, ಅಂಗ್ರಪಂಕ್ತಿಯಲ್ಲಿ ನಿಲ್ಲುವುದಕ್ಕೆ ಸಾಧ್ಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ರಮೇಶ ಎಸ್ ಮಾಂಗಳೇಕರ್ ಅವರು, ನಾನು ನನ್ನ ವೃತ್ತಿ ಜೀವನ ಆರಂಭಿಸಿದ್ದು, ಕಾರವಾರ ಗ್ಯಾಸ್ ಕಾಲೇಜಿನಿಂದ. ನನ್ನ ವೃತ್ತಿ ಜೀವನದ ಕೊನೆಯ ಕ್ಷಣಗಳನ್ನು ಅಲ್ಲಿಂದಲೇ ಕೊನೆ ಮಾಡಬೇಕು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯ ಆಗಲಿಲ್ಲ. ನಾನು ಎಲ್ಲಿಂದ ಮಾತು ಆರಂಭಿಸಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಇಲ್ಲಿಯವರೆಗೆ ದೋಣಿ ಸಾಗಿಸಿಕೊಂಡು ಬಂದಿದ್ದೇನೆ. ಈ ದೋಣಿ ಸಾಗಲು ಹಿತೈಸಿಗಳು, ನಾನು ಪ್ರೀತಿಸುವ ಸ್ನೇಹಿತ ಬಳಗ, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ಹಾಗೂ ನನ್ನ ಕುಟುಂಬದ ಸದಸ್ಯರು ಇದಕ್ಕೆ ಸಾಥ್ ಕೊಟ್ಟಿದ್ದಾರೆ, ಇದನ್ನೆಲ್ಲ ನಾನು ಹೇಗೆ ಮರೆಯಲಿ, ಅದು ಎಂದಿಗೂ ಸಾಧ್ಯವಿಲ್ಲದ ಮಾತು ಎಂದು ಗದ್ಗದಿತರಾದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಮಾತನಾಡಿ, ಶಿಕ್ಷಕ ಮಾಂಗಳೇಕರ್ ಅವರ ವೃತ್ತಿ ಬದುಕು ಇಷ್ಟೊಂದು ಸುಂದರ ಆಗುವುದಕ್ಕೆ ಅವರಲ್ಲಿನ ಈ ಸಹಾನುಭೂತಿಯೇ ಸಾಕ್ಷಿ. ಅವರು ವೃತ್ತಿ ಬದುಕಿನ ಮತ್ತೊಂದು ಮಗ್ಗಲು ಬದಲಾಯಿಸುತ್ತಿದ್ದಾರೆ. ಅವರ ಬದುಕು ಮತ್ತೊಂದು ಆಯಾಮ ಪಡೆದುಕೊಳ್ಳಲಿ, ಅವರ ಶಿಷ್ಟ ವರ್ಗ ಮತ್ತಷ್ಟು ಹಬ್ಬಲಿ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ವಿ. ವಿ. ಘೋರ್ಪಡೆ, ಶಿವಾಜಿ ವಿಶ್ವವಿದ್ಯಾಲಯದ ನಿವೃತ್ತ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಂದ್ರ ಪಾಟೀಲ್, ಅಭಿನಂದನಾ ಗ್ರಂಥ ಸಮಿತಿ ಸದಸ್ಯರು ಇದ್ದರು.
ಡಾ. ಪೂಜಾ ಹಲ್ಯಾಳ ಸ್ವಾಗತಿಸಿದರು. ಪ್ರತೀಕ್ಷಾ ಮಾಂಗಳೇಕರ ನಿರೂಪಿಸಿದರು.

ಅಮ್ಮ, ಅಪ್ಪ ಇರಬೇಕಿತ್ತು, ಅವರನ್ನು ಮಿಸ್ ಮಾಡಿಕೋ‌ಳ್ತಾ ಇದ್ದೇನಿ: ಮಾಂಗಳೇಕರ್

ನಾನು ಎಲ್ಲಿಂದ ನನ್ನ ಮಾತುಗಳನ್ನು ಆರಂಭಿಸಲಿ. ಕಾರವಾರದಿಂದಲೋ, ಬೈಲಹೊಂಗಲಿನಿಂದಲೋ, ಕಿತ್ತೂರ ಖಾನಾಪುರದಿಂದಲೋ ಅದು ನನಗೆ ಗೊತ್ತಾಗ್ತಾ ಇಲ್ಲ. ಕನ್ನಡ ಬಾರದ ನಾನು, ಮರಾಠಿ ಪ್ರಭಾವ ಇರುವಂತಹ ಸಣ್ಣ ಕುಗ್ರಾಮದಿಂದ ಹೋಗಿ ಸಮಾಜಶಾಸ್ತ್ರ ಉಪನ್ಯಾಸಕನಾಗ್ತೇನಿ ಎಂದು ಅಂದುಕೊಂಡಿರಲಿಲ್ಲ. ನಾನು ನನ್ನ ವಿದ್ಯಾರ್ಥಿಗಳಿಂದ ಸಾಕಷ್ಟು ಕಲಿತೀದ್ದೇನಿ, ಅದನ್ನು ಇಂದು ಕೂಡ ಅಳವಡಿಸಿಕೊಂಡು ಮುಂದೇ ಹೋಗ್ತಾ ಇದ್ದೇನಿ, ಕಾರವಾರ ಸರಕಾರಿ ಕಾಲೇಜು ನನ್ನ ವೃತ್ತಿ ಬದುಕು ಬದಲಾಯಿಸಿದ ಎನ್ ಸೈಕ್ಲೋಪೀಡಿಯಾ, ಅದನ್ನು ಎಂದು ಮರೆಯೋದಕ್ಕೆ ಸಾಧ್ಯವೆ ಇಲ್ಲ. ನಾನು ಇವತ್ತು ನನ್ನ ಅಮ್ಮ, ಅಪ್ಪನನ್ನು ಮಿಸ್ ಮಾಡಿಕೋಳ್ತಾ ಇದ್ದೇನೆ. ಅವರು ಇವತ್ತು ಇರಬೇಕಿತ್ತು, ನನ್ನ ಈ ಸಾರ್ಥಕತೆ ನನ್ನ ವಿದ್ಯಾರ್ಥಿಗಳ ಮೂಲಕ ಕಂಡುಕೊಂಡಿದ್ದೇನೆ. ನಾನು ಗೆದ್ದಂತೆ, ಇಂತಹ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಎಲ್ಲರೂ ಸಾಥ್ ಕೊಟ್ಟಿದ್ದೀರಿ, ನನ್ನ ಪತ್ನಿ, ಮಗ, ಮಗಳು ಎಲ್ಲರೂ ಈ ಗೆಲವಿನ ದಾರಿಯಲ್ಲಿ ಇದ್ದಾರೆ ಎಂದು ಪ್ರೊ. ರಮೇಶ್ ಮಾಂಗಳೇಕರ್ ತಿಳಿಸಿದರು.

ಸಾರ್ಥಕ ಕ್ಷಣಗಳಿಗೆ ಸಾಕ್ಷಿ

ನಾನು ಮಾಂಗಳೇಕರ್ ಅವರು ವೃತ್ತಿ ಬದುಕು ಆರಂಭಿಸಿದ್ದು ಕಾರವಾರದ ಸರಕಾರಿ ಕಾಲೇಜಿನಿಂದ, ಅವರಲ್ಲಿ ಸಾಕಷ್ಟು ಗುಣಗಳನ್ನು ನಾನು ಅಳವಡಿಸಿಕೊಂಡಿದ್ದೇನೆ. ಅವರ ವೃತ್ತಿ ಬದುಕಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಶಿಷ್ಯ ಬಳಗ ಹೊಂದಿದ್ದಿರುವುದು ಅವರ ವೃತ್ತಿ ಬದುಕಿನ ಸಾರ್ಥಕ ಕ್ಷಣಗಳಿಗೆ ಸಾಕ್ಷಿ ಆಗಿದೆ.
ರಾಜೇಂದ್ರ. ಎಸ್. ನಾಯಕ್, ಪ್ರಾಚಾರ್ಯ ಕೋಟ ಕಾಲೇಜು,

ನಾವು ಮಾಂಗಳೇಕರ್ ಸರ್ ಶಿಷ್ಯರು

ನಾನು ಮಾಂಗಳೇಕರ್ ಸರ್ ಅವರ ವಿದ್ಯಾರ್ಥಿ, ಅವರೊಬ್ಬ ತಾಯಿ ಹೃದಯದ ಶಿಕ್ಷಕ, ಗಟ್ಟಿ ಧ್ವನಿಯಲ್ಲಿ ತಮ್ಮದೇ ಶೈಲಿಯಲ್ಲಿ ಮಾಡುವ ಪಾಠ ಬೋಧನೆ ನಿಜಕ್ಕೂ ನಮ್ಮನ್ನು ಆಕರ್ಷಣೆ ಮಾಡುತ್ತಿತ್ತು.
ಸರಿತಾ ಶೆಣ್ವೆ, ಹಳೆಯ ವಿದ್ಯಾರ್ಥಿನಿ

ಮಾಂಗಳೇಕರ್ ಅವರು ತಾನೊಬ್ಬ ಶಿಕ್ಷಕ ಎಂಬ ಗಡಿಯಾಚೇಗೆ ನಿಂತು ನಮ್ಮನ್ನು ಪ್ರಿತಿಯಿಂದ ಕಾಣುವಂತಹ ಮಾನವೀಯ ಮಿಡಿತದ ಶಿಕ್ಷಕ, ನಾವು ಅವರಲ್ಲಿ ಸಹೋದರ ಎಂಬ ಭಾವನೆ ಕಂಡಿದ್ದೇವೆ.
ಲೀಲಾ ನಾಯ್ಕ್, ಹಳೆಯ ವಿದ್ಯಾರ್ಥಿನಿ

ವೃತ್ತಿ ಬದುಕಿನ ಗುರು

ನನ್ನ ವೃತ್ತಿ ಬದುಕಿನ ಕ್ಷಣಗಳಿಗೆ ರಮೇಶ್ ಮಾಂಗಳೇಕರ್ ಅವರು ಸಾಕಷ್ಟು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಭಾವ ಬೀರಿದ್ದಾರೆ. ಅವರ ಆದರ್ಶಗಳಿಂದಲೇ ನಾವು ಈ ಮಟ್ಟಿಗೆ ಬೆಳೆಯುವುದಕ್ಕೆ ಸಾಧ್ಯ ಆಯಿತು. ಅವರೊಬ್ಬ ಪ್ರಾಚಾರ್ಯ ಎನ್ನುವ ಬದಲು ಸಹೋದರ ಎಂಬ ಭಾವನೆಯಿಂದ ನಮ್ಮನ್ನು ಕಂಡಿದ್ದಾರೆ.
ಡಾ. ಪೂಜಾ ಹಲ್ಯಾಳ, ಶಿಕ್ಷಕಿ

ಬೋಧನಾ ಶೈಲಿಗೆ ಆಕರ್ಷಿತ

ಅವರ ಬೋಧನಾ ಶೈಲಿಯಿಂದ ಆಕರ್ಷಿತರಾಗಿ ಹಿಂದಿನ ಬೆಂಚಿನಿಂದ ಮುಂದಿನ ಸಾಲಿಗೆ ಬರುವಂತಹ ಕ್ಷಣ ಬಂತು. ಕೆಲವು ಶಿಕ್ಷಕರು ಪಾಠ ಮಾತ್ರ ಬೋಧನೆ ಮಾಡುತ್ತಾರೆ. ಇನ್ನು ಕೆಲವರು ಪಾಠದ ಜತೆಗೆ ವಿದ್ಯಾರ್ಥಿಗಳ ಬದುಕಿನ ಜೀವನವನ್ನೆ ಬದಲಾಯಿಸುತ್ತಾರೆ. ಅಂತಹ ಸಾಲಿಗೆ ರಮೇಶ್ ಮಾಂಗಳೇಕರ್ ನಿಲ್ಲುತ್ತಾರೆ.
ನಾರಾಯಣ ಹೆಗಡೆ, ಹಳೆಯ ವಿದ್ಯಾರ್ಥಿ

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *